ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಆವರಿಸಿದ ಹಿನ್ನೆಲೆ ಕಳೆದ 8 ತಿಂಗಳಿನಿಂದ ಕಾಲೇಜು ಆರಂಭಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ನಾಳೆಯಿಂದ ಆರಂಭವಾಗುತ್ತಿವೆ.
ಕಾಲೇಜಿಗೆ ಬರುವ ವಿದ್ಯಾರ್ಥಿಗಳೇನು ನಿಯಮ ಪಾಲಿಸಬೇಕು?
ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮೊ ಕಾಲೇಜುಗಳ ತರಗತಿಗಳ ವಿದ್ಯಾರ್ಥಿಗಳು, ಕಾಲೇಜಿಗೆ ಬರಲು ಇಚ್ಚಿಸಿದ್ದರೆ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು. ದೈಹಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ತಂದು ಸ್ವತಃ ಅವರೇ ಉಪಯೋಗಿಸಬೇಕು.
ಕಾಲೇಜಿನವರಿಗೆ ಇರುವ ನಿಯಮಗಳೇನು?
ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಬೇಕು. ಕೋವಿಡ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಇದ್ದಲ್ಲಿ ಮಾತ್ರ ವಿದ್ಯಾರ್ಥಿಗಳು- ಬೋಧಕರು ಕಾಲೇಜಿಗೆ ಹಾಜರಾಗುವುದು.
ಇನ್ನು, ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್- ಫೇಸ್‌ಶಿಲ್ಡ್ ಅಥವಾ Visor ಅನ್ನು ಧರಿಸುವುದು. ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್ಗಳನ್ನು ತೆರೆಯುವಂತಿಲ್ಲ. ಹಾಗೇ ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಎನ್ಸಿಸಿ ಹಾಗೂ ಎನ್ಎಸ್ಎಸ್ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.
ಕಾಲೇಜು ಪ್ರವೇಶ- ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ನೆಲದ ಮೇಲೆ ನಿರ್ದಿಷ್ಟ ಗುರುತುಗಳನ್ನು ಮಾಡುವುದು. ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿದ್ದರೆ ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನ ನಿಷೇಧಿಸಲಾಗಿದೆ.
ಟೆಲಿ ಕೌನ್ಸೆಲಿಂಗ್
ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಟೆಲಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಷ್ಟೀಯ ಟೋಲ್ ಫ್ರಿ ಸಹಾಯವಾಣಿ- 84454440632 ಈ ಸಂಖ್ಯೆ ಕರೆ ಮಾಡಬಹುದು.
ಕಾಲೇಜು ಸಿದ್ಧತೆ ಪರಿಶೀಲಿಸಿದ ಪ್ರೊ. ಕೆ ಆರ್ ವೇಣುಗೋಪಾಲ್ :
ನಾಳಿನ ಕಾಲೇಜಿನ ಆರಂಭದ ಸಿದ್ಧತೆಯ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕೆ.ಆರ್. ವೇಣುಗೋಪಾಲ್ ಅವ್ರು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ತರಗತಿಗಳು ಆರಂಭವಾದರೆ ಸಿಲಬಸ್ ಯಾವ ರೀತಿ ಪೂರ್ತಿ ಮಾಡುವುದು ಎಂಬ ಪ್ರಶ್ನೆ ಇದೆ.
ಹೀಗಾಗಿ ಅದಷ್ಟು ಪ್ರಾಕ್ಟಿಕಲ್ ಕ್ಲಾಸ್ ಮಾಡಿ ಸಿಲಬಸ್ ಮುಗಿಸಲಾಗುತ್ತೆ ಅಂತ ತಿಳಿಸಿದರು. ಇನ್ನು ಪ್ರತಿ ದಿನ ಸಂಜೆ ವೇಳೆ ಸ್ಯಾನಿಟೈಸ್ ಅನ್ನ ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗಳು ಆರ್ಟಿ ಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ಬರಬೇಕು ಅಂತ ತಿಳಿಸಿದರು.
ಕಾಲೇಜು ಆರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಅವಶ್ಯಕವಿದ್ದು ಆ ಬಗ್ಗೆ ಮಾಹಿತಿಯನ್ನ ನೀಡಬೇಕಿದೆ.