ಬೆಂಗಳೂರು: ನಿನ್ನೆ ನಡೆದ ಗಲಭೆಯಲ್ಲಿ ಸಾರ್ವಜನಿಕ ಅಸ್ತಿಪಾಸ್ತಿಗಳನ್ನು ಹಾನಿಗೊಳಿಸಿರುವ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ, ಕಾವಲ್ ಭೈರಸಂದ್ರ ಪ್ರದೇಶಗಳಲ್ಲಿ ನಿನ್ನೆ ಸಂಜೆ ನಡೆದ ದಂಗೆಯು ಶಾಂತವಾಗಿರುವ ಬೆಂಗಳೂರು ನಗರಕ್ಕೆ ಕಪ್ಪು ಚುಕ್ಕೆಯಾಗಿದೆ. ಕಿಡಿಗೇಡಿಗಳು ದಾಂಧಲೆ ನಡೆಸಿ ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯನ್ನುಂಟು ಮಾಡಿರುವುದನ್ನು ಪತ್ರದಲ್ಲಿ ಖಂಡಿಸಿದ್ದಾರೆ.
ಪ್ರಸ್ತುತ ಘಟನೆಯಲ್ಲಿ ಪೊಲೀಸ್ ಸ್ಟೇಷನ್ ಅನ್ನು ಸುಟ್ಟು ಹಾಕಿದ್ದು, 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ರಾಜ್ಯ ಇಂತಹ ಸನ್ನಿವೇಶವನ್ನು ಹಿಂದೆಂದೂ ಕಂಡಿರಲಿಲ್ಲ. ಇಂತಹ ಘಟನೆಗಳಿಗೆ ಕಾರಣಕರ್ತರಾಗಿರುವ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಮುಂದೆಂದೂ ಇಂತಹ ಘಟನೆ ನಡೆಯದಂತೆ ಜಾಗೃತೆ ವಹಿಸುವ ಅಗತ್ಯತೆ ಇದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ 2019ರಲ್ಲಿ ಆ ರಾಜ್ಯದಲ್ಲಿ ಸಂಭವಿಸಿದ ಗಲಭೆಗಳಿಗೆ ಕಾರಣರಾದ ದಂಗೆಕೋರರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಮಾದರಿ ನೀತಿ ಅನುಸರಿಸಿದರು. ಲಾಕ್ಟೋ ನಗರ ಒಂದರಲ್ಲೇ ಸುಮಾರು 50 ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಿ, 1.55 ಕೋಟಿ ರೂ. ಗಳ ಆಸ್ತಿ ಜಪ್ತಿ ಮಾಡಿಕೊಳ್ಳಲು ಅಕ್ಟೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಸಹ ಸಾರ್ವಜನಿಕ ಆಸ್ತಿಗಳಿಗೆ ಹಾನಿಯನ್ನುಂಟು ಮಾಡುವ ದಂಗೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟು ಮಾಡುವವರ ಆಸ್ತಿಗಳನ್ನು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಮುಟ್ಟುಗೋಲು ಹಾಕಿಕೊಂಡು ಆಗಿರುವ ನಷ್ಟವನ್ನು ಗಲಭೆಕೊರರಿಂದಲೇ ಭರಿಸುವ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಈ ಘಟನೆಯಲ್ಲಿ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಗಳ ಪಾತ್ರದ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಕೋರಿದ್ದಾರೆ.
ಬೆಂಗಳೂರು ಶಾಂತ, ಸೌಹಾರ್ದ ವಾತಾವರಣ ಹೊಂದಿರುವ ದೇಶದ ಪ್ರತಿಷ್ಠಿತ ನಗರವಾಗಿದೆ. ಅದನ್ನು ಸಂರಕ್ಷಿಸಲು ಹಾಗು ನಗರದ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ, ಕಠಿಣ ಕ್ರಮಗಳನ್ನು ತೆಗೆದುಕೊಂಡು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ವಿನಂತಿಸಿದ್ದಾರೆ.