ಬೆಂಗಳೂರು: ಲಾಕ್ಡೌನ್ ಪರಿಣಾಮದಿಂದಾಗಿ ರಾಜ್ಯದಲ್ಲಿ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಪಾಸಿಟಿವಿಟಿ ದರ ಶೇ.7.71 ಕ್ಕೆ ಇಳಿದಿದೆ. ಆದರೆ ಮರಣ ಪ್ರಮಾಣ ಶೇ.2.62 ಕ್ಕೆ ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ಇದರ ನಡುವೆಯೂ ಹಂತ-ಹಂತದ ಅನ್ಲಾಕ್ ಪ್ರಕ್ರಿಯೆ ಆರಂಭಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.
ರಾಜ್ಯದಲ್ಲಿ ಜೂನ್ 14 ರವರೆಗೂ ಲಾಕ್ಡೌನ್ ಜಾರಿಯಲ್ಲಿದ್ದು, ಅನ್ಲಾಕ್ ಪ್ರಕ್ರಿಯೆ ಆರಂಭಿಸಲು ತಜ್ಞರ ಸಮಿತಿ ಸಲಹೆಯಂತೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಂದೇ ಬಾರಿ ಅನ್ಲಾಕ್ ಮಾಡಿದರೆ ಸೋಂಕಿನ ತೀವ್ರತೆ ಮತ್ತೆ ಹೆಚ್ಚಾಗುವ ಕಾರಣಕ್ಕೆ ಹಂತ-ಹಂತವಾಗಿ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ.
ಸದ್ಯ ರಾಜ್ಯದಲ್ಲಿ 2,54,505 ಸಕ್ರೀಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ.7.71 ರಷ್ಟಿದೆ. ತಜ್ಞರ ಸಮಿತಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆ ಆದ ನಂತರ ಅನ್ಲಾಕ್ ಪ್ರಕ್ರಿಯೆ ಆರಂಭಿಸಬಹುದು ಎಂದು ತಿಳಿಸಿದೆ. ಇನ್ನೊಂದು ವಾರದಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಯಾಗುವುದು ಖಚಿತವಾಗಿದೆ. ಹಾಗಾಗಿ, ತಜ್ಞರ ಸಲಹಾ ಸಮಿತಿ ಶಿಫಾರಸ್ಸಿನಂತೆ ಅನ್ಲಾಕ್ ಪ್ರಕ್ರಿಯೆ ಆರಂಭಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಮರಣ ಪ್ರಮಾಣದ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುತ್ತಿದೆ. ಮರಣದರ ಶೇ.1 ಕ್ಕಿಂತ ಕಡಿಮೆಯಾಗಬೇಕು ಎನ್ನುವ ಶಿಫಾರಸ್ಸು ಮಾಡಿದೆ. ಸದ್ಯ ಮರಣ ದರ ಹೆಚ್ಚಳವಾಗುತ್ತಲೇ ಇದ್ದು, ಇದೀಗ ಶೇ.2.62 ರಷ್ಟಾಗಿದೆ. ಇದು ಅನ್ಲಾಕ್ ಪ್ರಕ್ರಿಯೆ ಆರಂಭಕ್ಕೆ ಸ್ವಲ್ಪ ತೊಡಕಾಗಿದೆ.
ಮೂರು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಸಕ್ರೀಯ ಪ್ರಕರಣಗಳಿದ್ದು, ನಾಲ್ಕು ಜಿಲ್ಲೆಗಳಲ್ಲಿ 1-2 ಸಾವಿರ ಸಕ್ರೀಯ ಪ್ರಕರಣಗಳಿವೆ. 11 ಜಿಲ್ಲೆಗಳಲ್ಲಿ 2-5 ಸಾವಿರ ಸಕ್ರೀಯ ಪ್ರಕರಣಗಳಿದ್ದು, 7 ಜಿಲ್ಲೆಗಳಲ್ಲಿ 5-10 ಸಾವಿರ, 4 ಜಿಲ್ಲೆಗಳಲ್ಲಿ 10-15 ಸಾವಿರ ಕೇಸ್ ಇದ್ದು, 1 ಜಿಲ್ಲೆಯಲ್ಲಿ 1ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳು ಇವೆ.
ಬೀದರ್ ಜಿಲ್ಲೆಯಲ್ಲಿ ಅತಿ ಕಡಿಮೆ ಸಕ್ರೀಯ ಪ್ರಕರಣ ಇವೆ. ಕೇವಲ 159 ಕೇಸ್ ಮಾತ್ರ ಇದ್ದು, ಕಲಬುರಗಿಯಲ್ಲಿ 952, ಯಾದಗಿರಿಯಲ್ಲಿ 977 ಕೇಸ್ ಇದ್ದು, ಇವು ಕಡಿಮೆ ಸಕ್ರೀಯ ಪ್ರಕರಣ ಇರುವ ಟಾಪ್ ತ್ರೀ ಜಿಲ್ಲೆಗಳಾಗಿವೆ.
ಸಕ್ರಿಯ ಪ್ರಕರಣದ ಟಾಪ್ 3 ಜಿಲ್ಲೆ: ಅದೇ ರೀತಿ ಬೆಂಗಳೂರು ನಗರ ಅತಿ ಹೆಚ್ಚು ಸಕ್ರೀಯ ಪ್ರಕರಣ ಇರುವ ಜಿಲ್ಲೆಯಾಗಿದ್ದು, 1,17,430 ಕೇಸ್ ಬೆಂಗಳೂರು ನಗರ ಜಿಲ್ಲೆಯಲ್ಲಿದ್ದರೆ, ಮೈಸೂರಿನಲ್ಲಿ 14,416, ಹಾಸನದಲ್ಲಿ 11,921 ಸಕ್ರೀಯ ಕೇಸ್ಗಳಿದ್ದು ಅತಿ ಹೆಚ್ಚು ಸಕ್ರಿಯ ಪ್ರಕರಣ ಇರುವ ಟಾಪ್ ತ್ರೀ ಜಿಲ್ಲೆಗಳಾಗಿವೆ.
ರಾಜ್ಯದ 5 ಜಿಲ್ಲೆ ಹೊರತುಪಡಿಸಿದರೆ ಇತರ 25 ಜಿಲ್ಲೆಗಳಲ್ಲಿ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದ್ದು, ಈ ಜಿಲ್ಲೆಗಳಲ್ಲಿ ಜೂನ್ 14 ರಂದು ಅನ್ಲಾಕ್ ಪ್ರಕ್ರಿಯೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ನಗರ ಸಾರಿಗೆಗೆ ಅವಕಾಶ, ಅಂತರ್ ಜಿಲ್ಲೆ ಸಂಚಾರಕ್ಕೆ ಅನುಮತಿ ನೀಡಿ, ಅಗತ್ಯ ವಸ್ತು ಖರೀದಿ ಸಮಯ ವಿಸ್ತರಣೆ ಮಾಡಲಾಗುತ್ತದೆ. ಆದರೆ ಕಠಿಣ ಮಾರ್ಗಸೂಚಿ ನೈಟ್ ಕರ್ಫ್ಯೂ ಮುಂದುವರೆಸಲಾಗುತ್ತದೆ ಎನ್ನಲಾಗಿದೆ.
ಸರ್ಕಾರಿ ಕಚೇರಿಗಳ ಆರಂಭಕ್ಕೆ ಅನುಮತಿ: ಬೆಂಗಳೂರಿನಲ್ಲಿಯೂ ಬಿಎಂಟಿಸಿ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದ್ದು, ಸಾರಿಗೆ ಸಿಬ್ಬಂದಿ ಹಾಜರಿಗೆ ಸೂಚನೆ ನೀಡಲಾಗಿದೆ. ಗರಿಷ್ಠ ಶೇ.50 ರಷ್ಟು ಉದ್ಯೋಗಿಗಳ ಹಾಜರಾತಿಯೊಂದಿಗೆ ಉದ್ದಿಮೆಗಳ ಆರಂಭಕ್ಕೆ ಸರ್ಕಾರಿ ಕಚೇರಿಗಳ ಆರಂಭಕ್ಕೆ ಅನುಮತಿ ನೀಡುವ ಚಿಂತನೆ ಇದೆ ಎನ್ನಲಾಗಿದೆ.
ಆದರೆ, ಈ ಎಲ್ಲ ಅವಕಾಶಗಳನ್ನು ಏಕಾಏಕಿ ನೀಡುವುದು ಅನುಮಾನವಾಗಿದ್ದು, ಬೆಂಗಳೂರಿನ ಮಟ್ಟಿಗೆ ಸ್ವಲ್ಪ ಬಿಗಿಯಾದ ರೀತಿಯಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಕೆಲವೊಂದು ವಿನಾಯಿತಿ ನೀಡಿ ಲಾಕ್ಡೌನ್ ಅನ್ನು ಜೂನ್ 21 ರವರೆಗೆ ವಿಸ್ತರಣೆ ಮಾಡಬೇಕು ಎನ್ನುವ ಚಿಂತನೆಯೂ ಸರ್ಕಾರದ್ದಾಗಿದ್ದು, ಪಾಸಿಟಿವಿಟಿ ದರ ಮತ್ತು ಮರಣ ಪ್ರಮಾಣ ನೋಡಿಕೊಂಡು ಜೂನ್ 21 ರವರೆಗೂ ಲಾಕ್ಡೌನ್ ಮುಂದೂಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಅನ್ಲಾಕ್ ಆರಂಭಕ್ಕೆ ದಿನಗಣನೆ: ಒಟ್ಟಿನಲ್ಲಿ ರಾಜ್ಯದಲ್ಲಿ ಅನ್ಲಾಕ್ ಆರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಈಗಿರುವ ನಿಯಂತ್ರಿತ ಸ್ಥಿತಿಯೇ ಮುಂದುವರೆದಲ್ಲಿ ಜೂನ್ 14 ಕ್ಕೆ ಅನ್ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮರಣದರ ಹಾಗು ಪಾಸಿಟಿವಿಟಿ ದರದಲ್ಲಿ ಮತ್ತೆ ವ್ಯತ್ಯಾಸವಾದರೆ ಅನ್ಲಾಕ್ ಪ್ರಕ್ರಿಯೆ ಮತ್ತೊಂದು ವಾರ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಓದಿ: ಸಂದಿಗ್ಧ ಪರಿಸ್ಥಿತಿಯಲ್ಲಿ ಜನರೊಂದಿಗೆ ನಿಂತ ಶಾಸಕ.. ದೇಶಾದ್ಯಂತ ರೇಣುಕಾಚಾರ್ಯರ ಸೇವೆಗೆ ಸಲಾಂ ಎಂದ ಜನ