ಬೆಂಗಳೂರು: ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶದ ಪರಿಹಾರ ಕಾರ್ಯಾಚರಣೆಗೆ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘ 150 ಕೋಟಿ ರೂ.ಗಳ ನೆರವು ನೀಡುವ ವಾಗ್ದಾನ ನೀಡಿದೆ.
ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ನೆರೆ ಪರಿಹಾರ ಸಂಬಂಧ ನೌಕರರ ಒಂದು ದಿನದ ವೇತನ ನೀಡುವ ಭರವಸೆಯನ್ನು ಈ ವೇಳೆ ಸಿಎಂಗೆ ಸಂಘದ ಪದಾಧಿಕಾರಿಗಳು ನೀಡಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಷಡಕ್ಷರಿ, ರಾಜ್ಯದಲ್ಲಿ ಪ್ರವಾಹ ಸ್ಥಿತಿ, ಅತಿವೃಷ್ಟಿ ಹಿನ್ನೆಲೆ, ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕನಿಷ್ಟ 150 ಕೋಟಿ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ತುರ್ತು ಪರಿಹಾರ ನಿಧಿಗೆ ದೇಣಿಗೆ ಕೊಡಲು ನಿರ್ಧಾರ ಕೈಗೊಂಡಿದ್ದೇವೆ. ಈ ಸಂಬಂಧ ಸಿಎಂಗೆ ಸಂಘದಿಂದ ಪತ್ರ ನೀಡಿದ್ದೇವೆ ಎಂದರು. ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ದೇಣಿಗೆ ರೂಪದಲ್ಲಿ ಕೊಡಲು ನಿರ್ಧಾರಿಸಿದ್ದು ಸುಮಾರು 5.50 ಲಕ್ಷ ಸರ್ಕಾರಿ ನೌಕರರ ಒಂದು ದಿನದ ವೇತನ ಕೊಡುವ ಮೂಲಕ ನೆರವು ನೀಡಲಿದ್ದೇವೆ ಎಂದರು.
ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ಪಾಟೀಲ್, ಖಜಾಂಚಿ ಶ್ರೀನಿವಾಸ, ಗೌರವಾಧ್ಯಕ್ಷ ಶಿವರುದ್ರಯ್ಯ ಮತ್ತು ಪದಾಧಿಕಾರಿಗಳು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ್ ಉಪಸ್ಥಿತರಿದ್ದರು.