ಬೆಂಗಳೂರು : ನಗರದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್ ಕಾರ್ಖಾನೆಯವರೆಗೆ ಕೊನೆಗೊಳ್ಳುವ ಮೇಲುಸೇತುವೆ ಹಾಗೂ ಯಶವಂತಪುರ ವೃತ್ತದಿಂದ(ಸಂವಿಧಾನ ವೃತ್ತ) ಕೆನ್ನಮೆಟಲ್ ಕಾರ್ಖಾನೆವರೆಗಿನ ರಸ್ತೆಗೆ ಡಾ. ಶಿವಕುಮಾರ ಸ್ವಾಮೀಜಿ ರವರ ಹೆಸರನ್ನು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ, ಶ್ರೀ ಸಿದ್ಧಲಿಂಗ ಮಹಾಸ್ವಾಮಿ ನಾಮಕರಣ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ಧಲಿಂಗ ಮಹಾಸ್ವಾಮಿ, ಶಿವಕುಮಾರ ಸ್ವಾಮೀಜಿ ಅವರ ಹೆಸರು ನಗರದಲ್ಲಿ ಅಜರಾಮರವಾಗಿರುವಂತೆ ಮಾಡಲು ಬಿಬಿಎಂಪಿ ತುಮಕೂರು ರಸ್ತೆ ಹಾಗೂ ಮೇಲು ಸೇತುವೆಗೆ ನಾಮಕರಣ ಮಾಡುವ ಮೂಲಕ ಗೌರವ ಸೂಚಿಸಿರುವುದು ಶ್ಲಾಘನೀಯ ಎಂದರು.
ಮೇಯರ್ ಗಂಗಾಂಬಿಕೆ ಮಾತನಾಡಿ, ಸಮಾಜದ ಕಟ್ಟಕಡೆಯ ಮಗುವಿಗೂ ವಿದ್ಯಾಭ್ಯಾಸ ದೊರಯಬೇಕೆನ್ನುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹ ಸ್ವಾಮಿಗಳು, ಸುಮಾರು 8 ದಶಕಗಳಿಂದ ಅನ್ನ, ಅಕ್ಷರ, ಜ್ಞಾನ ನೀಡಿದ ತ್ರಿವಿಧ ದಾಸೋಹಿಗಳು, ಮಠದ ಪರಂಪರೆಯನ್ನು ವಿಶ್ವವಿಖ್ಯಾತಿಗೊಳಿಸಿದರು. ಹೀಗಾಗಿ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಿರುವುದು ನನ್ನ ಪುಣ್ಯ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ, ಶಾಸಕರಾದ ಮಂಜುನಾಥ್ ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗಿಯಾಗಿದ್ದರು.