ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮುಂದೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಹಿರಂಗವಾಗಿ ಏರು ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಧಾನಸೌಧದ ಸಚಿವರ ಕಚೇರಿಗೆ ಇಂದು ಶಾಸಕ ಗೂಳಿಹಟ್ಟಿ ಸಚಿವರ ಭೇಟಿಗೆ ತೆರಳಿದ್ದಾರೆ. ಆದರೆ, ಕಚೇರಿಯಲ್ಲಿ ಕಾರ್ಯಕರ್ತರೇ ತುಂಬಿದ್ದರು. ಸರಿಯಾಗಿ ಸ್ಪಂದಿಸದ ಹಿನ್ನೆಲೆ ಗೂಳಿಹಟ್ಟಿ ಸಚಿವರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗೂಳಿಹಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿಗೆ ಕಾದು - ಕಾದು ಸುಸ್ತಾಗಿದ್ದಾರೆ. ಸಚಿವರಿಂದ ಸ್ವಂದನೆ ಸಿಗದೇ ಇದ್ದಾಗ, ಸಿಟ್ಟಾದ ಗೂಳಿಹಟ್ಟಿ ಶೇಖರ್ ಸಚಿವರ ಮುಂದೆ ಏರು ಧ್ವನಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಗೂಳಿಹಟ್ಟಿ ಅವರನ್ನು ಕರೆದೊಯ್ದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮಾಧಾನ ಪಡಿಸಿದ್ದಾರೆ.
ಈ ಸಂದರ್ಭದ ನೋವು ತೋಡಿಕೊಂಡ ಗೂಳಿಹಟ್ಟಿ, ನಾವು ಬುಧವಾರ, ಗುರುವಾರ ಬೆಂಗಳೂರಿಗೆ ಆಗಮಿಸುತ್ತೇವೆ. ಈ ಸಂದರ್ಭದಲ್ಲಿ ಸಚಿವರು ಶಾಸಕರಿಗೆ ಸಿಗಬೇಕು ಹಾಗೂ ಅವರ ಸಮಸ್ಯೆಗೆ ಸ್ವಂದಿಸಬೇಕು. ಆದರೆ, ಸಚಿವರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಬಳಿಯೂ ನೋವು ತೋಡಿಕೊಂಡ ಗೂಳಿಹಟ್ಟಿ!
ಸಚಿವರು ಸಮರ್ಪಕವಾಗಿ ಸ್ಪಂದಿಸದ ವಿಚಾರವನ್ನು ಗೂಳಿಹಟ್ಟಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಬಹುತೇಕ ಶಾಸಕರು ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸರ್ಕಾರ ಬದಲಾವಣೆ ಆದರೂ ಯಾವುದೇ ಬದಲಾವಣೆ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.