ಬೆಂಗಳೂರು: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ತಮ್ಮ ಮಠದ ಆವರಣದ ವೃದ್ಧಾಶ್ರಮವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಶುಭಾಶಯ ತಿಳಿಸಿರುವ ಡಿಕೆಶಿ, ಕೊಪ್ಪಳದ ಗವಿಸಿದ್ದೇಶ್ವರ ಸಂಸ್ಥಾನ ಮಠದ ವೃದ್ಧಾಶ್ರಮವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಮುಂದಾಗಿರುವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಧನ್ಯವಾದಗಳು. ಕೋವಿಡ್ ಸಂಕಷ್ಟದ ಸಮಯದಲ್ಲಿ ಇಂತಹ ಅಗತ್ಯ ಸೇವಾ ಕಾರ್ಯಕ್ಕೆ ಶ್ರೀಮಠ ಮುಂದಾಗಿರುವುದು ಮಾದರಿಯಾಗಿದೆ ಎಂದಿದ್ದಾರೆ.
ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಕೇವಲ ಒಂದು ವಾರದ ಅವಧಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಆರಂಭಿಸಿದ್ದಾರೆ. ಈ ಆಸ್ಪತ್ರೆಗೆ ಕೊಯಮತ್ತೂರಿನಿಂದ ಆಕ್ಸಿಜನ್ ಪೈಪ್ಗಳನ್ನು ತಂದು ಜೋಡಿಸಲಾಗಿದೆ. ಜಿಲ್ಲಾಡಳಿತದ ಸಹಯೋಗದಲ್ಲಿ ಲಭಿಸಿದೆ. ಈಗಾಗಲೇ ಆಕ್ಸಿಜನ್ ಅಳವಡಿಕೆಯ 72 ಬೆಡ್ಗಳು ಸಂಪೂರ್ಣ ಸನ್ನದ್ಧವಾಗಿದ್ದು, ಚಿಕಿತ್ಸೆ ಕೂಡ ಆರಂಭಿಸಲಾಗಿದೆ. ಹೈಟೆಕ್ ತಂತ್ರಜ್ಞಾನವನ್ನು ಅಳವಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು ರೋಗಿಗಳಿಗೆ ಅಗತ್ಯವಿರುವ ಪ್ರೋಟೀನ್ಯುಕ್ತ ಆಹಾರವನ್ನು ಮಠದ ಮೂಲಕವೇ ಪೂರೈಸಲಾಗುತ್ತಿದೆ. ಮಠದ ಈ ಕಾರ್ಯಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಡಿ.ಕೆ.ಶಿವಕುಮಾರ್ ಸಹ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.