ನವದೆಹಲಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಈ ಬಗ್ಗೆ ಜಾಮೀನು ಮಂಜೂರು ಮಾಡಿದ್ದರ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ. ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ವಕೀಲೆ ಅಪರ್ಣಾ ಭಟ್ ಮೂಲಕ ಸುಪ್ರೀಂಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಗೌರಿ ಲಂಕೇಶ್ ಪರವಾಗಿ ವಾದ ಮಂಡಿಸಿದರು. ಈ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಆರೋಪಿ ಮೋಹನ್ಗೆ ಜಾಮೀನು: ವಿಚಾರಣೆಯಲ್ಲಿ ಅನಗತ್ಯ ವಿಳಂಬವಾಗಿದೆ. ಕೇಸ್ ಶೀಘ್ರ ಇತ್ಯರ್ಥವಾಗುವ ಸಾಧ್ಯತೆ ಇಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾದ ಮೋಹನ್ ನಾಯಕ್ ಕೋರಿದ್ದ. ಇದನ್ನು ಮನ್ನಿಸಿದ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್ 7 ರಂದು ಜಾಮೀನು ನೀಡಿತ್ತು.
ಇದರ ವಿರುದ್ಧ ಕವಿತಾ ಲಂಕೇಶ್ ಅವರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯ ಮೊದಲು ಮತ್ತು ನಂತರ ಹಂತಕರಿಗೆ ಆಶ್ರಯ ನೀಡಿದ ಆರೋಪನ್ನು ಮೋಹನ್ ನಾಯಕ್ ಹೊಂದಿದ್ದಾರೆ. ಕೇಸ್ನಲ್ಲಿ ಆತನನ್ನು ಆರೋಪಿ ನಂ. 2 ಎಂದು ಗುರುತಿಸಲಾಗಿದೆ. ಹಲವಾರು ಪಿತೂರಿಗಳಲ್ಲೂ ಭಾಗಿಯಾಗಿದ್ದಾರೆ. ಇದನ್ನೆಲ್ಲ ಪರಿಗಣಿಸದೇ ಹೈಕೋರ್ಟ್ ಜಾಮೀನು ನೀಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿಯೊಂದಿಗೆ ಮೋಹನ್ ನಿಕಟ ಸಂಪರ್ಕ ಹೊಂದಿದ್ದಾಗಿ ತನಿಖಾ ಸಂಸ್ಥೆಯು ಹೇಳಿದೆ. ಇದರೊಂದಿಗೆ ಆರೋಪಿ ನಂ.1 ಅಮೋಲ್ ಕಾಳೆ ಮತ್ತು ಮಾಸ್ಟರ್ ಆರ್ಮ್ಸ್ ಟ್ರೈನರ್ ರಾಜೇಶ್ ಡಿ. ಬಂಗೇರ ಕೂಡ ಈ ಕೃತ್ಯದಲ್ಲಿದ್ದಾರೆ. ಇದರ ಭಾಗವಾಗಿರುವ ಮೋಹನ್ ಅಪರಾಧವನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಹೈಕೋರ್ಟ್ ಎಡವಿದೆ ಎಂದು ಮನವಿಯಲ್ಲಿ ವಾದಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಗಳ ವಿಚಾರಣೆಯನ್ನು ತ್ವರಿತ ರೀತಿಯಲ್ಲಿ ಮುಗಿಸಲು ರಾಜ್ಯವು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದೆ. ಇದನ್ನೂ ಕೋರ್ಟ್ ಪರಿಗಣಿಸಿಲ್ಲ. ಇಂತಹದ್ದರಲ್ಲಿ ವಿಚಾರಣೆ ವಿಳಂಬವಾಗಿದೆ ಎಂದು ಆರೋಪಿಯ ಮಾತಿಗೆ ಕಿವಿಕೊಟ್ಟಿದ್ದು ಸರಿಯಲ್ಲ ಎಂದು ಕವಿತಾ ಲಂಕೇಶ್ ಅವರು ಅರ್ಜಿಯಲ್ಲಿ ತಕರಾರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಕೊಲೆ ಪ್ರಕರಣ: ಆರೋಪಿಗಳಿಗೆ ಆಶ್ರಯ ನೀಡಿದ್ದ ಮೋಹನ್ ನಾಯಕ್‌ಗೆ ಷರತ್ತುಬದ್ಧ ಜಾಮೀನು