ಬೆಂಗಳೂರು: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ಯಂತೆ ಪ್ರತಿ ಟನ್ ಕಬ್ಬಿಗೆ ಬೆಲೆ ನಿಗದಿಪಡಿಸುತ್ತೇವೆ. ಈ ಬಗ್ಗೆ ರೈತರು ಅನಗತ್ಯ ಗೊಂದಲಕ್ಕೆ ಒಳಗಾಗಬಾರದು. ರಾಜ್ಯ ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಕ್ಕರೆ ಸಚಿವ ಶಂಕರ್ ಪಟೇಲ್ ಮುನೇನಕೊಪ್ಪ ತಿಳಿಸಿದರು.
ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್ ಸದಸ್ಯ ಎನ್.ವೈ.ಪಾಟೀಲ್ ಪ್ರಶ್ನೆಗೆ ಸಚಿವರು ಉತ್ತರಿಸಿ, ಕೇಂದ್ರ ಸರ್ಕಾರವು ಪ್ರತಿ ವರ್ಷ ಕಬ್ಬಿಗೆ ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುತ್ತದೆ. ತಾವು ಬೆಳೆದ ಕಬ್ಬಿನ ಕಟಾವು ಮತ್ತು ಸಾಗಾಣಿಕಾ ವೆಚ್ಚವನ್ನು ರೈತರೇ ಭರಿಸಬೇಕು. ಇದನ್ನು ಸರ್ಕಾರದ ವತಿಯಿಂದ ಪಾವತಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಭೂ ಒಡೆತನದಲ್ಲಿ ಅಕ್ರಮವೆಸಗಿದ್ರೆ ಕ್ರಿಮಿನಲ್ ಕೇಸ್ : ಕೋಟ ಶ್ರೀನಿವಾಸ ಪೂಜಾರಿ
ಕಲಬುರಗಿ ಜಿಲ್ಲೆಯಲ್ಲಿ ಎನ್‍ಎಸ್‍ಎಲ್ ಶುಗರ್, ರೇಣುಕಾ ಶುಗರ್ ಮತ್ತು ಊಗರ್ ಶುಗರ್ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಎಫ್‌ಆರ್‌ಪಿ ದರದಂತೆಯೇ ಟನ್‍ಗೆ ಬೆಲೆ ನಿಗದಿಪಡಿಸಲು ಕಾರ್ಖಾನೆ ಮಾಲೀಕರಿಗೂ ಸೂಚನೆ ಕೊಟ್ಟಿದ್ದೇವೆ. ಒಂದು ವೇಳೆ ಅನ್ಯಾಯವಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ.