ಬೆಂಗಳೂರು: ಕೋವಿಡ್ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಹಲವು ಉಪಕರಣಗಳನ್ನು ಖರೀದಿಸಿದೆ. ಆದರೆ, ಈ ಖರೀದಿಗಳ ಹಿಂದೆ ಕೋಟ್ಯಂತರ ರೂಪಾಯಿ ಹಗರಣದ ಆರೋಪ ಕೇಳಿ ಬಂದಿದೆ. ಮೊದಲ ಕೋವಿಡ್ ಅಲೆ ಹಾಗೂ ಎರಡನೇ ಅಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಖರೀದಿಸಿದ ವಿವಿಧ ಸಾಧನ, ಉಪಕರಣಗಳಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ವಿಧಾನಮಂಡಲ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ಕೋವಿಡ್ ಖರೀದಿಗಳಿಗೆ ಸಂಬಂಧಿಸಿ ಎತ್ತಿದ ಆಕ್ಷೇಪ, ಆರೋಪಗಳೇನು ಎಂಬ ವರದಿ ಇಲ್ಲಿದೆ.
ರಾಜ್ಯ ಮೊದಲ ಕೋವಿಡ್ ಅಲೆ ಹಾಗೂ ಮತ್ತೆ ಅಬ್ಬರಿಸಿದ ಎರಡನೇ ಅಲೆಗೆ ಭಾಗಶಃ ಮಂಡಿಯೂರಿ ಹೋಗಿದೆ. ಕೋವಿಡ್ ಮಹಾಮಾರಿ ರಾಜ್ಯದ ಇಡೀ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲಾಗಿಸಿದೆ. ವೈದ್ಯರು, ಮುಂಚೂಣಿ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಕೋವಿಡ್ ಸಮರದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇತ್ತ ಅದೆಷ್ಟೋ ಮಂದಿ ಕೋವಿಡ್ ಅಟ್ಟಹಾಸಕ್ಕೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂಥ ವಿಪತ್ತಿನ ಸಮಯದಲ್ಲೂ ಅಧಿಕಾರಿಗಳು, ಜನಪ್ರತಿನಿಧಿಗಳು ಅವ್ಯವಹಾರಕ್ಕೆ ಕೈಹಾಕಿದ್ದಾರಾ ಎಂಬ ಅನುಮಾನ, ಪ್ರಶ್ನೆಗಳು ಇದೀಗ ಮೂಡಿದೆ.
ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಕೋವಿಡ್ ನಿಯಂತ್ರಣ ಸಂಬಂಧ ಖರೀದಿಸಿರುವ ವಿವಿಧ ಉಪಕರಣ, ಸಾಧನಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿರುವ ಗಂಭೀರ ಆರೋಪ ಮಾಡುತ್ತಿದೆ. ಉಪಕರಣ ಖರೀದಿಯಲ್ಲಿನ ಬೆಲೆ ವ್ಯತ್ಯಾಸದ ಸಂಬಂಧ ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆಗೆ ಕೆಲ ಗಂಭೀರ ಪ್ರಶ್ನೆಗಳನ್ನು ಕೇಳಿದೆ. ಕೋವಿಡ್ ಮೊದಲ ಅಲೆ ವೇಳೆ ಎಚ್.ಕೆ.ಪಾಟೀಲ್ ನೇತೃತ್ವದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ)ಹಾಗೂ ಎರಡನೇ ಅಲೆ ವೇಳೆ ರಾಮಲಿಂಗ ರೆಡ್ಡಿ ನೇತೃತ್ವದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಉಪಕರಣ ಖರೀದಿ ಬೆಲೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಿಎಸಿ ಆಕ್ಷೇಪಗಳೇನು?:
- ರಾಮಲಿಂಗಾರೆಡ್ಡಿ ನೇತೃತ್ವದ ಪಿಎಸಿ ಕೋವಿಡ್ ಪರಿಕರಗಳ ಖರೀದಿಯಲ್ಲಿನ ಲೋದೋಷಗಳ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆಗೆ ಸ್ಪಷ್ಟೀಕರಣ ಕೇಳಿ ಪ್ರಶ್ನಾವಳಿಗಳನ್ನು ಕಳುಹಿಸಿದೆ.
- ರಾಜ್ಯ ಸರ್ಕಾರ ಟೆಂಡರ್ ಮೂಲಕ ಪ್ರತಿ ಯೂನಿಟ್ 3-Part Hematology Cell Countsನ್ನು 2,96,180 ರೂ. ನೀಡಿ 1,195 ಯೂನಿಟ್‌ಗಳನ್ನು ಖರೀದಿಸಿದೆ. ಆದರೆ, ಅದೇ ಯೂನಿಟ್‌ಗೆ ಹಿಮಾಚಲ ಪ್ರದೇಶ ರಾಜ್ಯವು ಕೇವಲ 1,30,000 ರೂ. ನೀಡಿ ಖರೀದಿಸಿದೆ, ಈ ವ್ಯತ್ಯಾಸವು 25 ಕೋಟಿಯಷ್ಟು ಅಧಿಕವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
- ರಾಜ್ಯ ಸರ್ಕಾರ ಮೆಸಿಸೆಕ್ಸ್ ಕಾರ್ಪೋರೇಷನ್ ರಿಂದ ಪ್ರತಿ ಯೂನಿಟ್‌ಗೆ 8,35,000 ರೂ. ನೀಡಿ 165 ಯೂನಿಟ್‌ಗಳಷ್ಟು 5-Part Hematology Cell Counts ಖರೀದಿಸಲಾಗಿದೆ. ಆದರೆ, ಇದೇ ವಸ್ತುವನ್ನು ಕೇರಳ ರಾಜ್ಯ ಕೇವಲ 4,60,200 ರೂ. ನೀಡಿ ಖರೀದಿ ಮಾಡಲಾಗಿದೆ. ಅಂದರೆ ಅಧಿಕ ವೆಚ್ಚದ ಪ್ರಮಾಣ ರೂ.6.18 ಕೋಟಿಗಳಾಗಿದೆ.
- ಮೊದಲ ಬಾರಿಗೆ ರಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಖರೀದಿಸಲು ಆಹ್ವಾನಿಸಿದ್ದ ದರ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಬಹುಪಾಲು ಮೊದಲ ಬಾರಿ ದರಪಟ್ಟಿ ಸಲ್ಲಿಸಿದ್ದ ಕಂಪನಿಗಳೇ ಎರಡನೇ ಬಾರಿ ದರಪಟ್ಟಿ ಆಹ್ವಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಅಂತಿಮಗೊಳಿಸುವಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದ ಬೊಕ್ಕಸಕ್ಕೆ 14.75 ಕೋಟಿ ರೂ. ಹೆಚ್ಚುವರಿ ಹೊರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
- ಇಲಾಖೆ ರಚಿಸಿದ್ದ ಕಾರ್ಯಪಡೆ 80.34 ಕೋಟಿಗಳಿಗೆ ಔಷಧ ಖರೀದಿಗೆ ಅನುಮತಿಯನ್ನು ನೀಡಿದ್ದರೂ, ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ತ್ವರಿತ ಕ್ರಮಗಳನ್ನು ತೆಗೆದುಕೊಂಡಿರದ ಕಾರಣದಿಂದಾಗಿ ಇನ್ನೂ ಔಷಧಿಗಳ ದಾಸ್ತಾನನ್ನು ವೃದ್ಧಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗಾಗಲೇ ತಜ್ಞರ ತಂಡಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರೂ ನಿಗಮ ಕುಂಟುತ್ತಾ ಕೆಲಸಗಳನ್ನು ನಿರ್ವಹಿಸುತ್ತಿದೆ.
- ಆಪ್ತಮಿತ್ರ ಟೆಲಿಮೆಡಿಸಿನ್‌ಗಳ ಖರೀದಿಯ ಗುತ್ತಿಗೆಯನ್ನು ಪ್ರತ್ಯೇಕ ಕಂಪನಿಗಳಿಗೆ ನೀಡಲಾಗಿದೆ. ಈ ಕುರಿತು ಟೆಂಡರ್ ಪ್ರಚಲಿತ ನಿಯಮಗಳನ್ನು ಪಾಲಿಸದೇ ಇಲಾಖೆಯು ಲೋಪವೆಸಗಿದ್ದರಿಂದ, ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಆಕ್ಷೇಪ ಎತ್ತಿದೆ.
- ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅತ್ಯವಶ್ಯಕವಾಗಿರುವ ಆಂಪೋಟೆರಿಸಿನ್ ಚುಚ್ಚುಮದ್ದು ಖರೀದಿಯಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ನಾಲ್ವರು ಬಿಡ್‌ದಾರರ ಪೈಕಿ ಇಬ್ಬರನ್ನು ಆಯ್ಕೆ ಮಾಡಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ಮೊದಲ ಬಿಡ್‌ದಾರ (ಎಲ್ 1) ಬದಲು ಎರಡನೇ ಬಿಡ್‌ದಾರ ನಮೂದಿಸಿದ್ದ 460 ರೂ. ಹೆಚ್ಚುವರಿ ದರದಲ್ಲಿ 25,000 ವಯಲ್‌ಗಳನ್ನು ಖರೀದಿಸಿತ್ತು. ಅ ಮೂಲಕ ಅಂದಾಜು 1.14 ರೂ. ನಷ್ಟವಾಗಿದೆ ಎಂಬ ಆರೋಪ ಇದೆ.
ಎಚ್.ಕೆ.ಪಾಟೀಲ್ ನೇತೃತ್ವದ ಪಿಎಸಿಯ ಆರೋಪ ಏನು?:
ಮೊದಲ ಕೋವಿಡ್ ಅಲೆಯಲ್ಲೂ ಕೋವಿಡ್ ಪರಿಕರಗಳ ಖರೀದಿಯಲ್ಲಿ ಭಾರೀ ಅಕ್ರಮದ ಆರೋಪ ಕೇಳಿ ಬಂದಿತ್ತು. ಆಗ ಸಮಿತಿಯ ಅಧ್ಯಕ್ಷರಾಗಿದ್ದ ಎಚ್.ಕೆ.ಪಾಟೀಲ್ ಖರೀದಿಯಲ್ಲಿನ ಅವ್ಯವಹಾರಗಳ ಬಗ್ಗೆ ತೀವ್ರ ಆಕ್ಷೇಪ ಹೊರಹಾಕಿದ್ದರು.
ಆ ಸಂದರ್ಭ ಪಿಎಸಿ ನೀಡಿದ ಪ್ರಾಥಮಿಕ ವರದಿಯಂತೆ ಪರಿಕರಗಳ ಖರೀದಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 135.27 ಕೋಟಿ ರೂ. ನಷ್ಟ ಆಗಿದೆ ಎಂದು ಆರೋಪಿಸಲಾಗಿತ್ತು. ಹೆಚ್ಚುವರಿ ದರದಲ್ಲಿ ಖರೀದಿಸಿ, ದರ ವ್ಯತ್ಯಾಸದ ಮೂಲಕ ವಿವಿಧ ಪರಿಕರಗಳ ಖರೀದಿಯಲ್ಲಿ ಬೊಕ್ಕಸಕ್ಕೆ ನಷ್ಟ ಆಗಿರುವುದಾಗಿ ಆಕ್ಷೇಪ ವ್ಯಕ್ತಡಿಸಲಾಗಿತ್ತು.
ಅದರಂತೆ 2020ಯಲ್ಲಿ ಖರೀದಿಸಿದ ಪಿಪಿಇ ಕಿಟ್ ಖರೀದಿಯಿಂದ ಸರ್ಕಾರದ ಬೊಕ್ಕಸಕ್ಕೆ 80.65 ಕೋಟಿ ರೂ. ನಷ್ಟ ಆಗಿತ್ತು. ಹ್ಯಾಂಡ್ ಸ್ಯಾನಿಟೈಸರ್ ಖರೀದಿಯಿಂದ 21.63 ಕೋಟಿ ರೂ. ನಷ್ಟ ಉಂಟಾಗಿತ್ತು. ಅದೇ ರೀತಿ ಎನ್ 95 ಮಾಸ್ಕ್ ಖರೀದಿಯಲ್ಲಿ ಸುಮಾರು 14.25 ಕೋಟಿ ರೂ. ನಷ್ಟ ಆಗಿತ್ತು. ಇನ್ನು ವೆಂಟಿಲೇಟರ್ ಖರೀದಿಯಿಂದ ಸುಮಾರು 6.7 ಕೋಟಿ ರೂ. ಬೊಕ್ಕಸಕ್ಕೆ ನಷ್ಟ ಆಗಿದೆ. ಥರ್ಮೋಮೀಟರ್ ಖರೀಯಲ್ಲಿ 4.96 ಕೋಟಿ ರೂ. ಹಾಗೂ ಆರ್ ಟಿಪಿಸಿಆರ್ ಕಿಟ್ ಖರೀದಿಯಲ್ಲಿ ಸುಮಾರು 5.90 ಕೋಟಿ ರೂ. ಬೊಕ್ಕಸಕ್ಕೆ ನಷ್ಟ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು.