ಬೆಂಗಳೂರು : ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿಸಿ ಕೊಡುವುದಾಗಿ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಜಿಮ್ರಾನ್ ಬಂಧಿತ ಆರೋಪಿಯಾಗಿದ್ದು, ಉದ್ಯಮಿಗಳು, ವ್ಯಾಪಾರಿಗಳನ್ನು ಪರಿಚಯ ಮಾಡಿಕೊಂಡು ಮಾರಾಟಕ್ಕಿಟ್ಟಿರುವ ಐಷಾರಾಮಿ ಕಾರುಗಳನ್ನು ಮುಂಗಡ ಹಣ ನೀಡಿ ಪಡೆಯುತ್ತಿದ್ದ ಆರೋಪಿ. ಅವುಗಳನ್ನು ಮಾಲೀಕರಿಗೆ ಗೊತ್ತಿಲ್ಲದಂತೆ ಅಕ್ಕ-ಪಕ್ಕದ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡಿ ಹಣ ನೀಡದೇ ವಂಚಿಸುತ್ತಿದ್ದ.
ಘಟನೆ ಹಿನ್ನೆಲೆ: ಉದ್ಯಮಿ ರಾಜು ಎಂಬುವವರ 18 ಲಕ್ಷಕ್ಕೆ ಖರೀದಿಸಿದ್ದ ರೇಂಜ್ ರೋವರ್ ಕಾರನ್ನು ಮಾರಾಟ ಮಾಡುವುದಾಗಿ ಆರೋಪಿ ಪಡೆದುಕೊಂಡಿದ್ದನು. ಇತ್ತ ಕೇಳಿದಾಗಲೆಲ್ಲ ಕಾರನ್ನು ನೀಡದೇ ನಂತರ ಉಳಿದ ಹಣವನ್ನೂ ನೀಡದೇ ಸತಾಯಿಸುತ್ತಿದ್ದ. ಹಣ ನೀಡುವಂತೆ ಕೇಳಿದಕ್ಕೆ ಜೀವ ಬೆದರಿಕೆ ಕೂಡ ಹಾಕಿದ್ದ.
ಈ ಬಗ್ಗೆ ರಾಜು ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಆರೋಪಿ ಸೈಯ್ಯದ್ ಜಿಮ್ರಾನ್ ನನ್ನ ಬಂಧಿಸಿದ್ದು, ತನಿಖೆ ವೇಳೆ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಆಸ್ಟಿನ್ ಮಾರ್ಟಿನ್ ಹಾಗೂ ಇನೋವಾ ಸೇರಿದಂತೆ 10 ಕೋಟಿ ಮೌಲ್ಯದ 9 ಐಷಾರಾಮಿ ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಪ್ರಚಾರಕ್ಕೆ ಕಾರು ಪಡೆದು ವಾಪಸ್ ನೀಡದೇ ಧಮ್ಕಿ ಹಾಕಿದ ಆರೋಪ: ನಲಪಾಡ್ ವಿರುದ್ಧ ದೂರು