ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಟಿವಿಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಾಲ್ಕು ವರ್ಷದ ಹಿಂದಿನ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಾಹೀರಾತಿನಲ್ಲಿ ಪಾಲಿಕೆ ಮೇಯರ್ ಗಂಗಾಂಬಿಕೆ ಮತ್ತು ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಎಂದು ಪ್ರಸಾರ ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ದೂರಲಾಗಿದೆ.
ಆಸ್ಪತ್ರೆಗಳಲ್ಲಿ ಕುಟುಂಬ ಕಲ್ಯಾಣ ಯೋಜನೆ, ಜನನ ನಿಯಂತ್ರಣ, ವಿಷ ಜಂತುಗಳ ಕಡಿತ, ಏಡ್ಸ್, ಮಲೇರಿಯಾ ಮತ್ತು ಡೆಂಘಿ ಸೇರಿ ವಿವಿಧ ರೋಗಗಳ ಬಗ್ಗೆ ಜಾಗೃತಿಗಾಗಿ ವಿಡಿಯೋ ಪ್ರಸಾರ ಮಾಡಲಾಗುತ್ತಿದೆ. ಆದರೆ, ಕಳೆದ ಮೂರ್ನಾಲ್ಕು ವರ್ಷದಿಂದ ಕುಟುಂಬ ಕಲ್ಯಾಣ ಯೋಜನೆಯ ಯಾವುದೇ ಹೊಸ ವಿಡಿಯೋಗಳನ್ನು ಸಿದ್ಧಪಡಿಸಿಲ್ಲ. ಕಳೆದ 4 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ.
ಮೇಯರ್ ಆಡಳಿತ ಪೂರ್ಣಗೊಂಡು ಆಡಳಿತಾಧಿಕಾರಿ ಆಡಳಿತ ಜಾರಿಯಲ್ಲಿದೆ. ಮತ್ತೊಂದೆಡೆ ಪಾಲಿಕೆಯ ಆಯುಕ್ತರು ಬದಲಾಗಿದ್ದಾರೆ. ಈ ಯಾವುದನ್ನೂ ಬದಲಾವಣೆ ಮಾಡದೇ ಹಳೇ ವಿಡಿಯೋ ಸಂದೇಶವನ್ನು ಇಂದಿಗೂ ಪ್ರಸಾರ ಮಾಡಲಾಗುತ್ತಿದೆ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಹೊಸ ವಿಡಿಯೋ ಪ್ರಸಾರ ಮಾಡಲು ಕ್ರಮ: ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಹಲವು ವರ್ಷಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯಾವುದೇ ಯೋಜನೆಗಳು ಬದಲಾವಣೆ ಆಗದಿರುವ ಹಿನ್ನೆಲೆ ವಿಡಿಯೋ ಬದಲಾವಣೆ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ಹೊಸ ವಿಡಿಯೋ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಓದಿ: ಕೆಆರ್ಎಸ್ ತುಂಬಲು ಒಂದೇ ಅಡಿ ಬಾಕಿ.. ರಾಜ್ಯದ ಇತರೆ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ