ಬೆಂಗಳೂರು: ಈ ಬಾರಿ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ವಿಶೇಷ ಒತ್ತು ನೀಡಲಾಗಿದೆ. ಸೆಪ್ಟೆಂಬರ್ನಲ್ಲಿ ಗಣೇಶ ಹಬ್ಬ ಆಚರಿಸುವುದಾದ್ರೂ, ಮೇ ತಿಂಗಳಲ್ಲೇ ಆದೇಶ ಹೊರಡಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಡ್ಡಾಯವಾಗಿ ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಬೇಕೆಂದು ಬಿಬಿಎಂಪಿ ಸೇರಿದಂತೆ ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ.
ಹೌದು, ಪ್ರತಿ ಬಾರಿ ಗಣೇಶ ಹಬ್ಬಕ್ಕೆ ಇನ್ನೇನು ನಾಲ್ಕೈದು ದಿನ ಇರುವಾಗ, ಮಣ್ಣಿನ ಗಣೇಶ ಮೂರ್ತಿ ಬಳಸಿ, ಪಿಒಪಿ ಬೇಡ ಎಂದು ಹೇಳಲಾಗ್ತಿತ್ತು. ಇದರಿಂದ ಅದಾಗಲೇ ಸಾವಿರಾರು ಪಿಒಪಿ ಮೂರ್ತಿಗಳ ತಯಾರಿಸಿಟ್ಟುಕೊಳ್ಳುತ್ತಿದ್ದ ವ್ಯಾಪಾರಿಗಳು ನಷ್ಟ ಮಾಡಿಕೊಳ್ಳದೇ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದರು. ಆದ್ರೆ ಈ ಬಾರಿ ಹಾಗಾಗದಂತೆ, ನಾಲ್ಕು ತಿಂಗಳು ಮೊದಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಮಾಲಿನ್ಯ ನಿಯಂತ್ರ ಮಂಡಳಿ ಬಿಬಿಎಂಪಿಗೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಆದೇಶಿಸಿದೆ.
ಜಲಮೂಲಗಳನ್ನು ಮಾಲಿನ್ಯಗೊಳಿಸುವ ಪಿಒಪಿ ಮೂರ್ತಿಗಳನ್ನು ತಯಾರಿಸಲೇಬಾರದು, ಮಾರಾಟ ಕೂಡ ಮಾಡಬಾರದು. ಜೊತೆಗೆ ಹೊರ ರಾಜ್ಯಗಳಿಂದ ತರಿಸಿಕೊಳ್ಳಲು ಪರವಾನಗಿಯನ್ನೂ ನೀಡಬಾರದು. ಇಷ್ಟು ಹೇಳಿದ ನಂತರವೂ ಪಿಒಪಿ ಮೂರ್ತಿಗಳನ್ನು ಬಳಸಿದ್ರೆ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಜಯರಾಮ್ ಎಚ್ಚರಿಕೆ ರವಾನಿಸಿದ್ದಾರೆ.
ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗಂಗಾಂಬಿಕೆ, ಈ ಬಾರಿ ಪಿಒಪಿ ಸಂಪೂರ್ಣ ನಿಷೇಧಿಸುವಂತೆ ಆಯುಕ್ತರಿಗೂ ಪತ್ರ ಬರೆದಿದ್ದೇನೆ ಮತ್ತು ಪಿಒಪಿ ಬಳಕೆಯಾದ್ರೆ ಅಧಿಕಾರಿಗಳೇ ಹೊಣೆಯಾಗ್ತಾರೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಸಣ್ಣಪುಟ್ಟ ದಂಡ, ಜಪ್ತಿ ಮಾಡುವ ಮೂಲಕ ಪಿಒಪಿ ಮೂರ್ತಿ ಮಾರಾಟಗಾರರಿಗೆ ಬಿಸಿಮುಟ್ಟಿಸುತ್ತಿದ್ದ ಪಾಲಿಕೆ, ಈ ಬಾರಿ ಕಠಿಣ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ.