ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರ್ಕಾರ ಮೌಖಿಕ ಆದೇಶದ ಮೂಲಕ ತಪಾಸಣೆಗಳನ್ನು ಕಡಿಮೆಗೊಳಿಸುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಅಂಕಿ-ಅಂಶ ತೋರಿಸುವ ಮೂಲಕ ರಾಜ್ಯದ ಜನತೆಯ ಆರೋಗ್ಯದ ಸ್ಥಿತಿಯನ್ನು ತೀರಾ ಗಂಭೀರವಾಗಿಸುವತ್ತ ಸರ್ಕಾರ ಮುನ್ನಡೆದಿದೆ. ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ತಪಾಸಣೆಗಳನ್ನು ಅತೀ ಕನಿಷ್ಠಗೊಳಿಸಲಾಗಿದೆ. ಇದರಿಂದ ಪಾಸಿಟಿವ್ ರೋಗಿಗಳ ಸಂಖ್ಯೆ ಸ್ವಾಭಾವಿಕವಾಗಿ ಇಳಿಮುಖವಾಗುತ್ತದೆ. ಇದೇ ಪ್ರಯೋಗವನ್ನು ರಾಜ್ಯಾದ್ಯಂತ ಮಾಡಲು ಹೊರಟಿರುವ ರಾಜ್ಯ ಸರ್ಕಾರ, ಇಂದಿನಿಂದ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೇವಲ 10 ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಸೀಮಿತಗೊಳಿಸಿ ಮೌಖಿಕ ಆದೇಶ ಹೊರಡಿಸಿದೆ ಎಂದು ಆರೋಪಿಸಿದ್ದಾರೆ.
ಉದಾಹರಣೆಗೆ ವಿಜಯಪುರ ಜಿಲ್ಲೆಯಲ್ಲಿ ಫೆಬ್ರವರಿಯಿಂದ ಇಲ್ಲಿಯವರಗೆ ಪ್ರತಿನಿತ್ಯ 4000 ತಪಾಸಣೆಗಳನ್ನು ಮಾಡಲಾಗುತ್ತಿತ್ತು. ಇದೀಗ ಜಿಲ್ಲೆಯಲ್ಲಿ 1660 ಆರ್.ಟಿ.ಪಿ.ಸಿ.ಆರ್ ಟೆಸ್ಟ್ಗಳಿಗೆ ಗರಿಷ್ಠ ಅವಕಾಶ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೂಡ ಪ್ರತಿನಿತ್ಯ 6000 ಆರ್.ಟಿ.ಪಿ.ಸಿ.ಆರ್ ಟೆಸ್ಟ್ಗಳನ್ನು 2500ಕ್ಕೆ ಇಳಿಸಲಾಗಿದೆ. ಇದರಿಂದ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ತೋರಿಸುವ ಸರ್ಕಾರ ನಿಜವಾದ ರೋಗಿಗಳ ಸಂಖ್ಯೆಯನ್ನು ಮುಚ್ಚಿಟ್ಟು ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವನ್ನು ಒದಗಿಸದೇ ವಂಚನೆ ಮಾಡುತ್ತಿರುವುದು ಅತ್ಯಂತ ಅಮಾನವೀಯ ಕೃತ್ಯ ಎಂದು ಕಿಡಿಕಾರಿದ್ದಾರೆ.
ಮಹಾನಗರ, ನಗರ, ಪಟ್ಟಣಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದ್ದು, ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಮಲೆನಾಡಿನ ಹಳ್ಳಿಗಳಲ್ಲಿಯೂ ಇದು ವ್ಯಾಪಕವಾಗಿ ಹಬ್ಬುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದರ ಹರಡುವಿಕೆಯನ್ನು ಗಮನಿಸಿದರೆ ಈ ರೋಗದ ಭೀಕರತೆ ತಿಳಿಯುತ್ತದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಹೆಚ್ಚೆಚ್ಚು ಆರ್.ಟಿ.ಪಿ.ಸಿ.ಆರ್. ಟೆಸ್ಟ್ಗಳನ್ನು ಮಾಡಿ, ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ, ಔಷಧಿ ಒದಗಿಸಲು ಮುಂದಾಗಬೇಕು. ಅದನ್ನು ಬಿಟ್ಟು ವಾಮಮಾರ್ಗದ ಮೂಲಕ ರೋಗಿಗಳ ಸಂಖ್ಯೆ ಇಳಿಕೆಯಗಿದೆ ಎಂದು ತೋರಿಸುವ ಮೂಲಕ ರಾಜ್ಯದ ಜನತೆಯನ್ನು ಮತ್ತಷ್ಟು ಪ್ರಪಾತಕ್ಕೆ ದೂಡುವ ಕಾರ್ಯ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.