ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ತಮ್ಮ ಬೆಂಬಲಿಗ ಶಾಸಕರನ್ನು ಸಮಾಧಾನಿಸುವಲ್ಲಿ ಸಿದ್ದರಾಮಯ್ಯ ಫೇಲ್ ಆಗಿದ್ದಾರೆ.
![Former CM Siddaramaiah](https://etvbharatimages.akamaized.net/etvbharat/prod-images/3782368_thu.jpg)
ಖಚಿತ ಮಾಹಿತಿಗಳ ಪ್ರಕಾರ, ಇಂದು ಮಧ್ಯಾಹ್ನ ರಾಜೀನಾಮೆ ನೀಡಿರುವ ತಮ್ಮ ಬೆಂಬಲಿಗ ಶಾಸಕರನ್ನು ಸಂಪರ್ಕಿಸುವಲ್ಲಿ ಸಿದ್ದರಾಮಯ್ಯ ಸಫಲರಾದರೂ ಅವರ ಮನ ವೊಲಿಸುವಲ್ಲಿ ವಿಫಲರಾಗಿದ್ದಾರೆ. ನಾವು ಮಾನಸಿಕವಾಗಿ ನಿಮ್ಮೊಂದಿಗೇ ಇದ್ದೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಜತೆ ಹೋಗುವುದು ಅನಿವಾರ್ಯವಾಗಿದೆ. ಇಷ್ಟು ವರ್ಷ ಸತತವಾಗಿ ನಿಮ್ಮನ್ನು ಬೆಂಬಲಿಸಿದ್ದೇವೆ. ಆದರೆ ಕೆಲವರು ಮಾತ್ರ ರಾಜಕೀಯ ಲಾಭವನ್ನು ನಿರಂತರವಾಗಿ ಪಡೆಯುತ್ತಿದ್ದಾರೆ.
ಇವತ್ತಿನ ಸನ್ನಿವೇಶ ಹೇಗಿದೆ ಎಂದರೆ 'ಬಾಯಿ ಬಿಟ್ಟು ಕೇಳಲಿಲ್ಲ ಎಂದರೆ ತಾಯಿ ಕೂಡಾ ಹಾಲುಣಿಸಲಾರಳು ಎಂಬಂತಿದೆ'. ಹೀಗಾಗಿ ನಮ್ಮ ಕ್ಷೇತ್ರದ ಜನರಿಗಾಗಿ ನಾವೇ ಶಕ್ತಿ ಗಳಿಸಿಕೊಳ್ಳಬೇಕಿದೆ. ನಮ್ಮಲ್ಲಿ ಕೆಲವರಿಗೆ ಮಂತ್ರಿಗಿರಿ ಸಿಗುವುದೂ ನಿಜ. ಆತಂಕದಲ್ಲಿರುವವರಿಗೆ ರಕ್ಷಣೆ ಸಿಗುವುದೂ ನಿಜ. ಆದ್ದರಿಂದ ಈ ಬಾರಿ ನಮ್ಮನ್ನು ಬಿಟ್ಟು ಬಿಡಿ ಎಂದು ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲೆತ್ನಿಸಿದ ಸಿದ್ದರಾಮಯ್ಯ ಅವರಿಗೆ ಶಾಸಕರು ಹೀಗೆ ಹೇಳಿದ್ದಾರೆ ಎನ್ನಲಾಗಿದೆ. ಈ ಮಾತುಕತೆಯ ನಂತರ ಕೆ.ಸಿ. ವೇಣುಗೋಪಾಲ್ ಜತೆ ಮಾತನಾಡಿದ ಸಿದ್ದರಾಮಯ್ಯ, ಈಗ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.