ಬೆಂಗಳೂರು : ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಪಿನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ, ಈಗ ರಾಜ್ಯ ಸರಕಾರವು ಅನಗತ್ಯ ಹಿಜಾಬ್ ವಿಷಯವನ್ನು ವಿವಾದ ಮಾಡುವ ಮೂಲಕ ಬೇಟಿ ಹಠಾವೋ ಮಾಡಲು ಹೊರಟಿದೆ ಎಂದು ದೂರಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಸರಿಯಾಗಿ ಶಾಲೆ-ಕಾಲೇಜುಗಳು ನಡೆಯದೇ ವಿದ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುತ್ತಿದ್ದಾರೆ. ಇಂಥ ಕಷ್ಟದ ಸಮಯದಲ್ಲಿ ಹಿಜಾಬ್ ವಿವಾದವನ್ನು ಸೃಷ್ಟಿ ಮಾಡಲಾಗಿದೆ. ಇದು ಅನಗತ್ಯವಾಗಿತ್ತು ಎಂದರು.
ಸರ್ಕಾರಗಳು ಬೇಟಿ ಪಡಾವ್, ಬೇಟಿ ಬಚಾವ್ ಅಂತಿದ್ದರು. ಈಗ ಬೇಟಿ ಹಠಾವೋ ಅನ್ನುವ ರೀತಿಯಲ್ಲಿ ವರ್ತಿಸುತ್ತಿವೆ. ರಾಜ್ಯದ ಸಾಮರಸ್ಯವನ್ನು ಹಾಳು ಮಾಡಲಾಗುತ್ತಿದೆ. ಶಾಂತಿಗೆ ಮತ್ತು ಪ್ರಗತಿಗೆ ಹೆಸರಾದ ರಾಜ್ಯದಲ್ಲಿ ಸಾಮರಸ್ಯ ನೆಲೆಸಬೇಕು ಎನ್ನುವ ಮನಸ್ಸಿದ್ದರೆ ರಾಷ್ಟ್ರೀಯ ಪಕ್ಷಗಳ ನಾಯಕರು ಹಿಜಾಬ್ ಮತ್ತು ಕೇಸರಿ ಶಾಲುಗಳ ವಿಷಯವನ್ನು ಇಲ್ಲಿಗೆ ಬಿಡಲಿ ಎಂದು ಕಿವಿಮಾತು ಹೇಳಿದರು.
ಸಿಎಂ ಸರಿಯಾಗಿ ನಿಭಾಯಿಸಬೇಕು : ಯಾವುದೇ ಅಸೂಯೆ, ದ್ವೇಷ ಇಲ್ಲದ ನಿರ್ಮಲ ಮನಸ್ಸಿನ ಮಕ್ಕಳಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಷ ತುಂಬುವುದು ಬೇಡ. ಕಳೆದ ಹದಿನೈದು ದಿನಗಳಿಂದ ಕೇಳಿ ಬರುತ್ತಿರುವ ಈ ವಿಷಯವನ್ನು ಇಲ್ಲಿಗೇ ಬಿಡುವುದು ಉತ್ತಮ.
ಮುಖ್ಯಮಂತ್ರಿಗಳು ಇಂಥ ಸೂಕ್ಷ್ಮ ವಿಷಯಗಳನ್ನು ಬೆಳೆಯಲು ಬಿಡದೇ ಸರಿಯಾಗಿ ನಿಭಾಯಿಸಬೇಕು. ಯಾವುದೇ ಕಾರಣಕ್ಕೂ ಸಮಾಜದ ವಾತಾವರಣ ಕಲುಷಿತ ಆಗದ ರೀತಿ ನೋಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಕರಾವಳಿ ಪ್ರದೇಶದಲ್ಲಿ ಕೆಲ ಕಡೆ ಈ ರೀತಿಯ ಹಿಜಾಬ್ ವ್ಯವಸ್ಥೆ ಇತ್ತು ಅನ್ನುವುದು ನನ್ನ ಗಮನಕ್ಕೆ ಬಂದಿದೆ. ಸೂಕ್ಷ್ಮವಾದ ಇಂಥ ನಂಬಿಕೆಗಳ ಬಗ್ಗೆ ಯಾರೂ ಕೆರಳಿಸುವ ರೀತಿಯಲ್ಲಿ ವರ್ತಿಸಬಾರದು. ಯಾವ ಶಾಲೆಯಲ್ಲಿ ಹಿಜಾಬ್ಗೆ ಅನುಮತಿ ಕೊಟ್ಟಿದ್ದಾರೋ ಅವರು ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಈಗ ಕೆಲವರು ಇಂಥವಕ್ಕೆ ಯಾಕೆ ಅನುಮತಿ ಕೊಟ್ಟರು? ಹಿಂದು-ಮುಸ್ಲಿಂ ಅನ್ನುವುದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಇಂಥಾ ಸಂಕುಚಿತ ಭಾವನೆ ಬೆಳೆಯಲು ಯಾರೂ ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದರು.
ರಾಷ್ಟ್ರೀಯ ಪಕ್ಷಗಳಿಗೆ ಶೋಭೆಯಲ್ಲ : ಒಂದೆಡೆ ಕೋವಿಡ್, ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿ ಸಮಸ್ಯೆಗಳಿಂದ ಜನರು ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಭಯದ ವಾತಾವರಣ ಉಂಟು ಮಾಡುವುದು ಬೇಡ. ರಾಷ್ಟ್ರೀಯ ಪಕ್ಷಗಳಿಗೆ ಶೋಭೆ ತರುವ ಕೆಲಸ ಇದಲ್ಲ. ಹಿಂದಿನಿಂದ ಶಾಲೆಗಳು ಯಾವ ರೀತಿ ನಡೆಯುತ್ತಿದ್ದವೋ ಹಾಗೆ ನಡೆಯಲಿ. ಇರುವ ಉತ್ತಮ ವ್ಯವಸ್ಥೆಯನ್ನು ಯಾರೂ ಹಾಳು ಮಾಡುವುದು ಬೇಡ ಎಂದರು.
ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಆಗುವ ಹುಚ್ಚು : ಕಾಂಗ್ರೆಸ್ ಪಕ್ಷದ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಬ್ಬರಿಗೂ ಮುಖ್ಯಮಂತ್ರಿ ಆಗುವ ಹುಚ್ಚು. ಇಬ್ಬರಿಗೂ ವೋಟು ಪಡೆಯುವ ಹುಚ್ಚು ಹತ್ತಿಕೊಂಡಿದೆ. ಸಮಾಜಕ್ಕೆ ಒಳ್ಳೆಯದಾಗಲಿ ಅನ್ನುವುದು ಅವರಿಗಿಲ್ಲ. ಬಿಜೆಪಿಯವರಿಗೆ ಕೂಡ ಮತ ಪಡೆಯುವ ಹುಚ್ಚು ಬಂದಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಾರೆ. ಸಿದ್ದರಾಮಯ್ಯ ಒಂದು ಮಾತು ಹೇಳಿದರೆ, ಡಿಕೆಶಿ ಒಂದು ಮಾತು ಹೇಳುತ್ತಾರೆ. ಇವರಲ್ಲಿ ಒಬ್ಬರಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಉಮೇದು. ಮತ್ತೊಬ್ಬರಿಗೆ ಮುಸ್ಲಿಮರ ಪರ ಮಾತಾಡಿದರೆ ಏನು ಹೆಚ್ಚು ಕಡಿಮೆ ಆಗುತ್ತದೋ ಎಂಬ ಭಯ ಎಂದು ಅವರು ಕುಟುಕಿದರು.
ಮಹದಾಯಿ ಬಗ್ಗೆ ಕಾಂಗ್ರೆಸ್ ಪಕ್ಷದ್ದು ಎರಡು ನಾಲಿಗೆ : ಮಹಾದಾಯಿ ನದಿ ನೀರಿನ ವಿವಾದದ ಬಗ್ಗೆ ಕಾಂಗ್ರೆಸ್ ಎರಡು ನಾಲಿಗೆ ನೀತಿ ಅನುಸರಿಸುತ್ತಿದೆ. ಮಹಾದಾಯಿ ಬಗ್ಗೆ ಆ ಪಕ್ಷದ ಸತೀಶ್ ಜಾರಕಿಹೊಳಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನಿನ್ನೆ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಯಾವುದೇ ಕಾರಣಕ್ಕೂ ಮಹಾದಾಯಿ ನೀರನ್ನು ಗೋವಾದಿಂದ ಬಿಟ್ಟು ಕೊಡಲ್ಲ ಅಂತಾ ಹೇಳಿಕೊಂಡಿದಾರೆ. ಇದು ಅವರ ದ್ವಿಮುಖ ನೀತಿ ತೋರಿಸುತ್ತದೆ ಎಂದರು.
ಇಬ್ರಾಹಿಂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ : ಕಾಂಗ್ರೆಸ್ ತೊರೆದಿರುವ ಸಿಎಂ ಇಬ್ರಾಹಿಂ ಅವರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು. ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್ ಜತೆ ಗುರುತಿಸಿಕೊಂಡವರು. ನಡುವೆ ಕೆಲ ವ್ಯತ್ಯಾಸಗಳು ಆಗಿದ್ದವು. ಈಗ ಮತ್ತೆ ಜೆಡಿಎಸ್ ಜತೆ ಸೇರಿ ಮತ್ತೊಂದು ರಂಗ ರಚನೆ ಬಗ್ಗೆ ಅವರು ಮುಂದಾದರೆ ಸ್ವಾಗತ ಮಾಡುವೆ ಎಂದರು.