ಬೆಂಗಳೂರು : ರೈತ ವಿದ್ಯಾನಿಧಿ ಸೇರಿದಂತೆ ಬಿಜೆಪಿ ಸರ್ಕಾರದ ವೇಳೆ ಜಾರಿಗೆ ತಂದಿರುವ ಯಾವುದೇ ಯೋಜನೆಗಳ ಅನುದಾನ ಕಡಿತ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ತಮಗೆ ನನ್ನ ಅಭಿನಂದನೆಗಳು. ಕಳೆದ ಎರಡು ವಾರದಿಂದ ತಾವು ತಮ್ಮ ಪಕ್ಷ ನೀಡಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಹಲವಾರು ಸಭೆಗಳನ್ನು ನಡೆಸಿದ್ದೀರಿ. ಅದರಲ್ಲಿಯೂ ಅರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದು ಎಲ್ಲರಿಗೂ ತಿಳಿದಿದೆ.
ತಾವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸುಮಾರು 50 ಸಾವಿರ ಕೋಟಿ ರೂಪಾಯಿ ಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದೀರಿ. ಈ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಕೆಲವು ಎಚ್ಚರಿಕೆ ವಹಿಸುವುದು, ರಾಜ್ಯದ ಪ್ರಮುಖ ಕ್ಷೇತ್ರಗಳಾದ ಹಣಕಾಸು, ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲ ಸೌಕರ್ಯ, ರೈತರ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವುದು ಅವಶ್ಯಕತೆ ಇದೆ ಎನ್ನುವ ಮಾತು ಜನರಲ್ಲಿ ಕೇಳಿ ಬರುತ್ತಿದೆ ಎಂದಿದ್ದಾರೆ.
ಯೋಜನೆಗಳಿಗೆ ಅನುದಾನ ಕಡಿತಗೊಳಿಸಬೇಡಿ: ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲಾವಧಿ ಸಾಲದ ಮಿತಿ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿರುವುದರಲ್ಲಿ ಯಾವುದೇ ಹಣಕಾಸಿನ ಕಡಿತ ಮಾಡುವುದು ಸೂಕ್ತವಲ್ಲ. ರೈತರ ಕನಿಷ್ಠ ಬೆಂಬಲಬೆಲೆ ಯೋಜನೆ ಅಡಿಯಲ್ಲಿ ಆವರ್ತ ನಿಧಿ 3,500 ಕೋಟಿಗೆ ಹೆಚ್ಚಿಸಲು 2023-24ರ ಆಯವ್ಯಯದಲ್ಲಿ 1,500 ಕೋಟಿ ಒದಗಿಸಲಾಗಿದ್ದು, ಇದು ಅತ್ಯಂತ ಅಗತ್ಯವಾಗಿದೆ. ಇದನ್ನು ಕಡಿತಗೊಳಿಸಬಾರದು.
ವಿವೇಕ ಯೋಜನೆ ಅಡಿಯಲ್ಲಿ 7,601 ಶಾಲಾ ಕೊಠಡಿಗಳು ಹಾಗೂ ಇತರ ಯೋಜನೆ ಸೇರಿ ಒಟ್ಟು 9,856 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದೆ. ಇದರಲ್ಲಿ ಅನುದಾನದ ಕಡಿತ ಮಾಡಬಾರದು. ರೈತರು, ಕಾರ್ಮಿಕರು, ಮೀನುಗಾರರು, ನೇಕಾರರು ಇತರರಿಗೆ ರೈತ ವಿದ್ಯಾನಿಧಿ ಕಾರ್ಯಕ್ರಮ ಮುಂದುವರೆಸುವುದು ಅತ್ಯಂತ ಅವಶ್ಯವಿದೆ. ಇದಕ್ಕೆ ಸೂಕ್ತ ಅನುದಾನ ಆಯವ್ಯಯದಲ್ಲಿ ಒದಗಿಸಿದ್ದು, ಇದನ್ನು ಮುಂದುವರೆಸಬೇಕು ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ.
ಉಚಿತ ಡಯಾಲಿಸಿಸ್ ಸೇವೆ ಒಂದು ಲಕ್ಷ ಸೈಕಲ್ಗೆ ವಿಸ್ತರಣೆ ಮಾಡಿದ್ದು, ಹಾಗೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕಿಮೊ ಥೆರಪಿ ಸೈಕಲ್ಗಳನ್ನು ಹೆಚ್ಚಿಸುವಂತಹದ್ದು, ಮತ್ತು ಪಿಹೆಚ್ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ ಮಾಡುವ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಕಡಿತಗೊಳಿಸಬಾರದು ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದಕ್ಕೆ ಅನುದಾನ ಕಡಿತಗೊಳಿಸಬಾರದು. ಹಾಗೂ ಗ್ರಾಮೀಣ ಮೂಲ ಸೌಕರ್ಯ ಯೋಜನೆಗಳಾದ ಜಲಜೀವನ ಮಿಷನ್, ಗೃಹ ನಿರ್ಮಾಣ, ನೀರಾವರಿ ಯೋಜನೆಗಳು ಹಾಗೂ ಪಂಚಾಯತಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳುವುದು, ಅದೇ ರೀತಿ ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ ಪ್ರಗತಿ ಮೊಟಕುಗೊಳಿಸಬಾರದು. ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು, ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಅವಶ್ಯವಿದೆ ಎಂದಿದ್ದಾರೆ.
ನಗರ ಪ್ರದೇಶಗಳಲ್ಲಿ ನಗರೋತ್ಥಾನ ಸ್ಮಾರ್ಟ್ ಸಿಟಿ ಯೋಜನೆ, ಮೆಟ್ರೊ, ಸಬ್ ಅರ್ಬನ್' ಯೋಜನೆಗಳನ್ನು ಮುಂದುವರೆಸುವುದು ಬೆಂಗಳೂರಿನ ಅಭಿವೃದ್ಧಿಗೆ ಅತಿ ಅಗತ್ಯವಿದೆ. ಈ ವಿಷಯಗಳ ಜೊತೆಗೆ ಇತರ ಇಲಾಖೆಗಳ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವುದು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕ. ಇದು ರಾಜ್ಯ ಸರ್ಕಾರದ ಜವಾಬ್ದಾರಿ, ಈ ಬಗ್ಗೆ ಅನುದಾನವನ್ನು ಖಚಿತಪಡಿಸುವುದು ಹಾಗೂ ಸಮಗ್ರ ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡಬೇಕಾಗಿ ಪತ್ರದ ಬೊಮ್ಮಾಯಿ ಮೂಲಕ ಆಗ್ರಹಿಸಿದ್ದಾರೆ.
ತಾವು ಕೊಡುತ್ತಿರುವ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು. ಜೊತೆಗೆ ರಾಜ್ಯದ ಜನತೆಯ ಮೇಲೆ ಅಪರೋಕ್ಷವಾಗಿ ಹೆಚ್ಚಿನ ಭಾರ ಬೀಳಬಾರದೆಂದು ಈ ಪತ್ರ ಬರೆಯುತ್ತಿದ್ದೇನೆ. ತಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಿರಿ ಎಂಬ ನಂಬಿಕೆ ಇದೆ ಎಂದು ಸುದೀರ್ಘ ಪತ್ರದಲ್ಲಿ ಬೊಮ್ಮಾಯಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಬಿಎಸ್ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ