ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಅಧಿಕಾರಕ್ಕರ ಬಂದಿದೆ. ಇದರ ಬೆನ್ನಲ್ಲೇ ಇದೀಗ ಬಿಬಿಎಂಪಿ ಚುನಾವಣೆಗೂ ಕೈ ಪಡೆ ಸಿದ್ಧತೆ ಆರಂಭಿಸಿದೆ. ಇನ್ನೇನು ಕೆಲ ತಿಂಗಳಲ್ಲೇ ಅವಧಿ ಪೂರ್ಣಗೊಂಡಿರುವ ಬಿಬಿಎಂಪಿಗೆ ಚುನಾವಣೆ ಘೋಷಣೆ ಅಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸ್ವಲ್ಪ ಹೆಚ್ಚಾಗಿಯೇ ಚುನಾವಣೆ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿದೆ.
2020 ರಲ್ಲಿಯೇ ಬಿಬಿಎಂಪಿ ಅಧಿಕಾರ ಅವಧಿ ಮುಗಿದಿದೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ರಾಜಕೀಯ ಪಕ್ಷಗಳಿಗೆ ಚುನಾವಣೆ ನಡೆಸುವ ಉತ್ಸಾಹ ಇರಲಿಲ್ಲ. ಅಲ್ಲದೇ ವಿಧಾನಸಭೆ ಚುನಾವಣೆ ಮುಂದಿಟ್ಟು ಬಿಬಿಎಂಪಿ ಚುನಾವಣೆ ನಡೆಸಿದರೆ ಅದು ಮುಖ್ಯ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಇತ್ತು.
ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರದಲ್ಲಿ ಬಿಬಿಎಂಪಿ ಅಧಿಕಾರ ಅವಧಿ ಮುಗಿದಿತ್ತು. ಹಿಂದಿನ ಸರ್ಕಾರ ಸಹ ಚುನಾವಣೆಗೆ ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ. ವಾರ್ಡ್ ಮರುವಿಂಗಡಣೆ, ವಾರ್ಡ್ ಮೀಸಲಾತಿ ಘೋಷಣೆ, ಇದಕ್ಕೆ ಎದುರಾದ ತಕರಾರು ನಿವಾರಣೆಗೆ ವಿಳಂಬ ಧೋರಣೆ ಸೇರಿದಂತೆ ಹಲವು ಕಾರಣಕ್ಕೆ ಚುನಾವಣೆ ಮುಂದಕ್ಕೆ ಹಾಕಲಾಗಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸದ್ಯ ಗೆಲುವಿನ ಅಲೆಯಲ್ಲೇ ಬಿಬಿಎಂಪಿ ಚುನಾವಣೆ ಹಾಗೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಅವಧಿ ಮುಗಿದಿರುವ ಹಿನ್ನೆಲೆ ಯಾವುದೇ ಸಂದರ್ಭದಲ್ಲೂ ಬಿಬಿಎಂಪಿಗೆ ಚುನಾವಣೆ ಘೋಷಣೆ ಆಗಬಹುದು. ಈ ಹಿನ್ನೆಲೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಸಚಿವ ಡಿ.ಕೆ. ಶಿವಕುಮಾರ್ ವಿಶೇಷ ಸಮಿತಿ ರಚಿಸಿದ್ದಾರೆ. ಬಿಬಿಎಂಪಿ ಚುನಾವಣಾ ಪೂರ್ವತಯಾರಿ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದಾರೆ. ಈ ಸಮಿತಿಯು ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು, ಕಾನೂನಾತ್ಮಕ ಸಾಧಕ ಬಾಧಕಗಳನ್ನು ಪರಾಮರ್ಶಿಸಬೇಕು. ಎಲ್ಲ ವಾರ್ಡ್‌ಗಳಲ್ಲಿ ಯಶಸ್ವಿಯಾಗಿ ಚುನಾವಣೆ ಎದುರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು 15 ದಿನಗಳೊಳಗೆ ಕೂಲಂಕಷ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಸಮಿತಿ ವಿವರ : ಸಮಿತಿಯಲ್ಲಿ ರಾಮಲಿಂಗಾರೆಡ್ಡಿ, ಸಚಿವರು (ಅಧ್ಯಕ್ಷ), ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಎನ್.ಎ. ಹ್ಯಾರಿಸ್, ಬೈರತಿ ಸುರೇಶ್, ಪ್ರಿಯಕೃಷ್ಣ, ಎ.ಎಸ್.ಪೊನ್ನಣ್ಣ, ಪಿ.ಆರ್.ರಮೇಶ್, ಮಾಜಿ ಮಹಾಪೌರರು (ಸಂಚಾಲಕರು), ರಮೇಶ್ ಬಾಬು, ಮಾಜಿ ಶಾಸಕ, ಜಿ.ಪದ್ಮಾವತಿ ಮಾಜಿ ಮಹಾಪೌರರು ಇದ್ದಾರೆ.
ಅವಧಿ ಮುಗಿದಿತ್ತು : 2020ರಲ್ಲೇ ಬಿಬಿಎಂಪಿ ಅಧಿಕಾರ ಅವಧಿ ಮುಗಿದಿತ್ತು. ವಾರ್ಡ್ ಮರು ವಿಂಗಡಣೆ ನಂತರ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆಯಾಗಿತ್ತು. ಆದರೆ ಅವೈಜ್ಞಾನಿಕವಾಗಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ನಿಗದಿ ಮಾಡಲಾಗಿದೆ ಎಂದು ಕಾಂಗ್ರೆಸ್ ವಲಯದಿಂದ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ನ್ಯಾಯಾಲಯ ಕೂಡ ಚುನಾವಣೆ ನಡೆಸುವಂತೆ ಮೂರು ನಾಲ್ಕು ಬಾರಿ ಗಡುವು ನೀಡಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ : ಐದು ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಖಚಿತ, ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ