ಬೆಂಗಳೂರು: ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಯ ಪ್ರವಾಹ ಸಂತ್ರಸ್ತರು ನಗರಕ್ಕೆ ಆಗಮಿಸಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದ ನೆರೆ ಸಂತ್ರಸ್ತರು ಸರ್ಕಾರದಿಂದ ಸಮರ್ಪಕವಾಗಿ ಪರಿಹಾರ ದೊರೆಯುತ್ತಿಲ್ಲ. ಈ ವಿಷಯದ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.
ನಾಳೆಯಿಂದ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುತ್ತಿದ್ದು, ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯರ ಪಾತ್ರ ಅತ್ಯಂತ ಪ್ರಮುಖವಾದುದಾಗಿರುತ್ತದೆ. ಇದರಿಂದಲೇ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರವನ್ನು ಒಳಗೊಂಡಿರುವ ಜಿಲ್ಲೆಯಾದ ಬಾಗಲಕೋಟೆ ಹಾಗೂ ಪಕ್ಕದ ಜಿಲ್ಲೆಯಾದ ಬೆಳಗಾವಿ ಮುಂತಾದ ಕಡೆಗಳಿಂದ ಸಂತ್ರಸ್ತರು ಆಗಮಿಸಿ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ, ತಮ್ಮ ಸ್ಥಾನದ ಜವಾಬ್ದಾರಿ ನಿಭಾಯಿಸಿ ತಾವು ಈ ವಿಚಾರವನ್ನು ಪ್ರಸ್ತಾಪಿಸುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ರಾಜ್ಯ ಸರ್ಕಾರ ಕರೆದಿರುವ ಉಭಯ ಸದನಗಳ ಅಧಿವೇಶನ ನಾಳೆಯಿಂದ ಐದು ದಿನಗಳ ಕಾಲ ನಡೆಯಲಿದ್ದು, ಬಜೆಟ್ ಪೂರ್ವಭಾವಿ ಚರ್ಚೆ ನಡೆಯಲಿದೆ. ಮಾರ್ಚ್ 5ರಂದು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿರುವ ಬಿ. ಎಸ್. ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದು ಈ ಸಂದರ್ಭ ಪ್ರವಾಹ ಸಂತ್ರಸ್ತರಿಗೆ ವಿಶೇಷ ಅನುದಾನದ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಒತ್ತಡ ಹೇರುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.