ಬೆಂಗಳೂರು: ನಕಲಿ ದಾಖಲಾತಿ ತೋರಿಸಿ ತಿರುಪತಿಯಲ್ಲಿ ಜಮೀನು ಮಾರಾಟಕ್ಕಿದೆ ಎಂದು ಹೇಳಿ ಉದ್ಯಮಿಯಿಂದ 1.90 ಕೋಟಿ ರೂಪಾಯಿ ಪಡೆದು ವಂಚಿಸಿದ್ದ ಐವರನ್ನ ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಆಂಧ್ರಪ್ರದೇಶದ ಮೂಲದ ರಾಧಾಕೃಷ್ಣ ಎಂಬುವರು ನೀಡಿದ ದೂರಿನ ಮೇರೆಗೆ ರಾಜೇಶ್, ಸಂಜಯ್, ಶ್ರೀನಿವಾಸ್, ಮೋಗಿಲೇಶ್ವರ್, ಪ್ರಭಾಕರ್ ರೆಡ್ಡಿ, ರಾಜೇಶ್, ಪೋಲ್ಸಾನಿ ರವಿ ಎಂಬುವರನ್ನ ಸೆರೆ ಹಿಡಿದು 65 ಲಕ್ಷ ನಗದು ಹಣ, 8.5 ಲಕ್ಷದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಾಲ್ಕು ಕಾರುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಧಾಕೃಷ್ಣ ಸ್ನೇಹಿತ ಶಿವಕುಮಾರ್ ಮುಖಾಂತರ ಸಂಜಯ್ ಶ್ರೀನಿವಾಸ್ ಅವರಿಂದ ತಿರುಪತಿಯಲ್ಲಿ 13 ಎಕರೆ ಜಮೀನು ಖರೀದಿಗೆ ಮುಂದಾಗಿದ್ದರು. ಜಮೀನಿಗೆ ನಕಲಿ ದಾಖಲೇ ಸೃಷ್ಟಿಸಿ ಸಂಜಯ್, ಶ್ರೀನಿವಾಸ್ ಇಬ್ಬರು ಸೇರಿ ರಾಧಾಕೃಷ್ಣಗೆ ತೋರಿಸಿದ್ದರು. ಮುಂಗಡ ಹಣ ನೀಡುವ ಸಂಬಂಧ ಅಗ್ರಿಮೆಂಟ್ ಮಾಡಿಸಲು ರಾಧಕೃಷ್ಣ ಕಳೆದ ತಿಂಗಳು 10 ರಂದು ನಗರದ ಹೋಟೇಲ್ ಅಶೋಕದಲ್ಲಿ ಉಳಿದುಕೊಂಡಿದ್ದರು.
ನಂತರ ತನ್ನ ಸ್ನೇಹಿತ ಶಿವಕುಮಾರ್ ಆರೋಪಿ ಸಂಜಯ್ ಜೊತೆಗೆ ಹಣ ಕೊಟ್ಟು ಅಗ್ರಿಮೆಂಟ್ ಮಾಡಲು ಕಳುಹಿಸಿದ್ದಾರೆ. ಕಾರಿನಲ್ಲಿ ಕೆ.ಆರ್.ಪುರದ ಕಡೆಗೆ ಬರುತ್ತಿದ್ದಂತೆ ಶಿವಕುಮಾರ್ ಅವರನ್ನ ಕುಡಿಯುವ ನೀರಿನ ಬಾಟೆಲ್ ಬೇಕೆಂದು ಕಾರಿನಿಂದ ಇಳಿಸಿದ ಆರೋಪಿಗಳು 1 ಕೋಟಿ 90 ಸಾವಿರ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಆರೋಪಿಗಳು ವಂಚಿಸಿದ್ದ ಹಣದಲ್ಲಿ ಚಿನ್ನ ಖರೀದಿ ಮಾಡಿ ಮೋಜು ಮಸ್ತಿ ಮಾಡಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ವಂಚಿಸಿರುವ ಬಗ್ಗೆ ಅನುಮಾನವಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪಾರ್ಟ್ ಟೈಂ ಕೆಲಸದ ಆಮಿಷ, ವ್ಯಕ್ತಿಗೆ 6.5 ಲಕ್ಷ ರೂ. ವಂಚನೆ
ಇತ್ತೀಚಿನ ಘಟನೆ: ವೈದ್ಯಕೀಯ ಶಿಕ್ಷಣದ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಹೈದರಾಬಾದ್ ಮೂಲದ ಶರತ್ ಗೌಡ ಬಂಧಿತ ಆರೋಪಿ. ಸಂಜಯ ನಗರದಲ್ಲಿ ನೆಕ್ಸಸ್ ಎಡು ಎಂಬ ಹೆಸರಿನ ಕಚೇರಿ ತೆರೆದಿದ್ದ ಶರತ್, ಸಿಇಟಿಯಲ್ಲಿ ರ್ಯಾಂಕಿಂಗ್ ಕಡಿಮೆ ಬಂದ ವಿದ್ಯಾರ್ಥಿಗಳ ಪೋಷಕರು, ವೈದ್ಯಕೀಯ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿರುವವರ ಮಾಹಿತಿಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುತ್ತಿದ್ದ. ನಂತರ ಅವರುಗಳನ್ನ ಸಂಪರ್ಕಿಸಿ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ ಅಥವಾ ಡ್ರಾಪ್ ಔಟ್ ಆಗಿರುವ ಸೀಟುಗಳನ್ನು ಕಡಿಮೆ ಖರ್ಚಿನಲ್ಲಿ ತಾನು ಕೊಡಿಸುವುದಾಗಿ ನಂಬಿಸುತ್ತಿದ್ದ.
ಇದೇ ರೀತಿ ಕೇರಳದ ವೈದ್ಯಕೀಯ ಕಾಲೇಜೊಂದರಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ತಿಮ್ಮೇಗೌಡ ಎಂಬುವರಿಂದ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಹೀಗೆ 8-10 ಜನರಿಗೆ ವಂಚಿಸಿರುವುದು ತಿಳಿದು ಬಂದಿದ್ದರಿಂದ ಆರೋಪಿ ವಿರುದ್ಧ ದೂರು ದಾಖಲಿಸಲಾಗಿತ್ತು.