ಬೆಂಗಳೂರು: ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ದಾಖಲಾತಿ ದಿನಾಂಕವನ್ನು ದಂಡ ಶುಲ್ಕವಿಲ್ಲದೇ ಪಾವತಿಸಲು ಈ ಹಿಂದೆಯೂ ದಿನಾಂಕ ವಿಸ್ತರಿಸಲಾಗಿತ್ತು. ದಾಖಲಾತಿಯನ್ನು ದಂಡ ಶುಲ್ಕವಿಲ್ಲದೇ ಆಗಸ್ಟ್ 13 ನಂತರ ಆಗಸ್ಟ್ 28ರ ತನಕ ಅವಕಾಶ ಕಲ್ಪಿಸಿಕೊಟ್ಟಿತ್ತು. ಇದೀಗ ಮತ್ತೊಮ್ಮೆ ವಿಸ್ತರಿಸಲಾಗಿದೆ.
ರಾಜ್ಯಾದ್ಯಂತ ಪೋಷಕರು, ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು, ಸರ್ಕಾರಿ ಮತ್ತು ಅನುದಾನಿತ ಪ್ರಾಂಶುಪಾಲರು ಸೇರಿದಂತೆ ಹಲವರು ವಿಸ್ತರಣೆಗೆ ಕೋರಿದ್ದಾರೆ. ಪಿಯು ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ದಾಖಲಾತಿಯಾಗಿಲ್ಲ ಎಂದು ತಿಳಿಸಿ ದಂಡ ಶುಲ್ಕವಿಲ್ಲದೇ ದಾಖಲಾತಿ ದಿನಾಂಕ ವಿಸ್ತರಿಸಲು ಮನವಿ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಪಿಯು ಬೋರ್ಡ್ ದಾಖಲಾತಿ ವೇಳಾಪಟ್ಟಿಯನ್ನ ಪ್ರಕಟಿಸಿದೆ.
ದಂಡ ಶುಲ್ಕವಿಲ್ಲದೇ ದಾಖಲಾತಿ ಕೊನೆಯ ದಿನಾಂಕವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1 ರಿಂದ 11ರ ತನಕ ಹಾಗೂ ವಿಳಂಬ ದಾಖಲಾತಿಯಾದರೆ 670 ರೂ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 25 ರ ತನಕ ದಾಖಲು ಆಗಬಹುದು. ಹಾಗೆಯೇ ಸೆಪ್ಟೆಂಬರ್ 27 ಅಕ್ಟೋಬರ್ 5ರ ತನಕ ವಿಶೇಷ ದಂಡ ಶುಲ್ಕ 2890 ರೂ. ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಬಹುದು. ಹಾಗೇ ದ್ವಿತೀಯ ಪಿಯುಸಿ ದಂಡ ಶುಲ್ಕವಿಲ್ಲದೇ ದಾಖಲಾತಿ ಕೊನೆಯ ದಿನಾಂಕವನ್ನು ಆಗಸ್ಟ್ 30ರಿಂದ ಸೆಪ್ಟೆಂಬರ್ 11ರ ತನಕ ಹಾಗೂ ವಿಳಂಬ ದಾಖಲಾತಿಯಾದರೆ 670 ರೂ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 13 - 25 ರ ತನಕ ದಾಖಲು ಆಗಬಹುದು. ಹಾಗೆಯೇ ಸೆಪ್ಟೆಂಬರ್ 27 ಅಕ್ಟೋಬರ್ 5ರ ತನಕ ವಿಶೇಷ ದಂಡ ಶುಲ್ಕ 2890 ರೂ. ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಬಹುದು.
2021-22ರ ಮಾರ್ಗಸೂಚಿ ಯಲ್ಲಿ ತಿಳಿಸಿರುವಂತೆ ದಾಖಲಾತಿ ಶುಲ್ಕ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಈ ರೀತಿ ಸಂಗ್ರಹಿಸಿದ ಶುಲ್ಕಗಳನ್ನ ಸರ್ಕಾರ/ಇಲಾಖೆಗೆ ದಾಖಲಾತಿ ದಿನಾಂಕ ಮುಗಿದ ಮಾರನೇ ಕಾರ್ಯನಿರತ ದಿನಾಂಕಕ್ಕೆ ಖಜಾನೆಗೆ ಶುಲ್ಕಗಳನ್ನು ಕಡ್ಡಾಯವಾಗಿ ಜಮೆ ಮಾಡುವಂತೆ ತಿಳಿಸಿದೆ.