ಹೊಸಕೋಟೆ : ಶನಿವಾರ ಪೊಲೀಸರ ಲಾಠಿಚಾರ್ಜ್ ಖಂಡಿಸಿ ಪ್ರತಿಭಟಿಸಿದ್ದ ಹಿನ್ನೆಲೆ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ 15 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ.
ಪೊಲೀಸರ ಲಾಠಿಚಾರ್ಜ್ ಖಂಡಿಸಿ ಶರತ್ ಬಚ್ಚೇಗೌಡ ಅವರ ನೇತೃತ್ವದಲ್ಲಿ ಸುಮಾರು 4000ಕ್ಕೂ ಹೆಚ್ಚು ಸ್ವಾಭಿಮಾನಿ ಮತ್ತು ಕಾಂಗ್ರೆಸ್ ಬೆಂಬಲಿಗರು ಶರತ್ ಬಚ್ಚೇಗೌಡ ಅವರ ಕಚೇರಿಯಿಂದ ಪೊಲೀಸ್ ಠಾಣೆವರೆಗೂ ಕಾಲ್ನಡಿಗೆಯಲ್ಲಿ ಜಾಥಾ ಮಾಡಿ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿ, ನಂತರ ಹೆದ್ದಾರಿ ಎನ್‌ಹೆಚ್ 7 ರಸ್ತೆ ತಡೆದು ಸುಮಾರು 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದ್ದರು.
ಈ ಹಿನ್ನೆಲೆ ಪೊಲೀಸರು ಶರತ್ ಮತ್ತು ಇನ್ನಿತರ 15 ಜನರ ಮೇಲೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕ್ರಮ ವಿರೋಧಿಸಿ ನಿನ್ನೆ ಪೊಲೀಸ್ ಠಾಣೆ ಮುಂದೆ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಶರತ್ ಮತ್ತು ಬೆಂಬಲಿಗರು ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹೆದ್ದಾರಿ ತಡೆ ಮಾಡಿರುವುದಕ್ಕೆ ಐಪಿಸಿ 143, 147, 341,283 ಮತ್ತು 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓದಿ: ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿದ ಶಾಸಕ ಶರತ್ ಬಚ್ಚೇಗೌಡ
ಪೊಲೀಸರು ಸುಮಾರು 15 ಜನ ಪ್ರಮುಖರು ಸೇರಿ 500 ರಿಂದ 600 ಜನರ ಮೇಲೆ ದೂರು ದಾಖಲು ಮಾಡಿದ್ದಾರೆ. ಅದರಲ್ಲಿ ಪ್ರಮುಖರು ಶರತ್ ಬಚ್ಚೇಗೌಡ, ಬೈರೇಗೌಡ, ಗೋಪಿ, ಮುನಿರಾಜ್, ಗೋಪಾಲ್, ಸುದರ್ಶನ್, ಇಮ್ರಾನ್, ಮಂಜುನಾಥ್, ರಾಕೇಶ್, ಅಜಿತ್ ಯಾದವ್ ಸೇರಿದ್ದಾರೆ.
ನಿನ್ನೆ ನಡೆದ ₹8 ಕೋಟಿ ವೆಚ್ಚದ ಮುಖ್ಯಮಂತ್ರಿಗಳ ವಿಷೇಶ ಅನುದಾನ ಪೂಜೆಗೆ ಶಾಸಕರನ್ನು ಕರೆದಿದ್ದರು. ಶಾಸಕರು ಪೂಜೆಗೆ ಬರದೆ ಬೆಂಬಲಿಗರನ್ನು ಬಿಟ್ಟು ಗಲಭೆ ಮಾಡಿಸಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.
ಶಿಷ್ಟಾಚಾರ ಉಲ್ಲಂಘಿಸಿ ಸಚಿವ ಎಂಟಿಬಿ ನಾಗರಾಜ ಅವರು ಗುದ್ದಲಿ ಪೂಜೆ ಮಾಡ್ತಿದ್ದಾರೆ ಎಂದು ಶರತ್ ಬೆಂಬಲಿಗರು ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿ ಚದುರಿಸಿದ್ದ ಪೊಲೀಸರು ಮೇಲೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಶಾಸಕ ಶರತ್ ಬಚ್ಚೇಗೌಡರ ಅವರು, ಸುಮಾರು ಮೂರು ಗಂಟೆಗೂ ಅಧಿಕ ಕಾಲ ಪೊಲೀಸ್ ಠಾಣೆ ಮುಂದೆ ಸಾವಿರಾರು ಬೆಂಬಲಿಗರಿಂದ ರಸ್ತೆ ತಡೆದಿದ್ದರು.
ಜತೆಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಕರ್ತವ್ಯಕ್ಕೆ ಮತ್ತು ರಾಜ್ಯ ಹೆದ್ದಾರಿಯನ್ನು ತಡೆದು ನೂರಾರು ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.