ಬೆಂಗಳೂರು : ಕೋವಿಡ್ ಬಳಿಕ ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಬಿಬಿಎಂಪಿಯ ಬಜೆಟ್ ಗಾತ್ರ 10,717 ಆದ್ರೆ ಪಾಲಿಕೆ ಎದುರಿಸುತ್ತಿರುವ ಆರ್ಥಿಕ ಹೊರೆ 22657 ಕೋಟಿ ರೂಪಾಯಿ. ನಿರೀಕ್ಷಿಸಿದಷ್ಟು ಆದಾಯ ಬರದಿದ್ದರೂ, ಅವೈಜ್ಞಾನಿಕ ಬಜೆಟ್ ಮಂಡನೆ, ಕೌನ್ಸಿಲ್ ನಿರ್ಧಾರಗಳೇ ಇದಕ್ಕೆ ಕಾರಣವಾಗ್ತಿವೆ ಎಂದು ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಈ ಸಾಲಿನ ಬಜೆಟ್ ಕಾಮಗಾರಿಗಳು, ಇದುವರೆಗೆ ಪೂರ್ಣಗೊಂಡ ಕಾಮಗಾರಿಗಳು, ಪ್ರಗತಿಯಲ್ಲಿರುವ, ಮುಂದುವರಿದ ಕಾಮಗಾರಿಗಳು, ಟೆಂಡರ್ ಹಂತದಲ್ಲಿರುವ ಕಾಮಗಾರಿಗಳೂ ಇದರಲ್ಲಿ ಸೇರಿವೆ.
ಕಾನೂನು ಉಲ್ಲಂಘಿಸಿ ಲ್ಯಾಪ್ ಟಾಪ್ ಖರೀದಿಗೆ ನಿರ್ಣಯ:
ಅಲ್ಲದೆ ಇತ್ತೀಚೆಗಷ್ಟೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಹಾಗೂ ಕೌನ್ಸಿಲ್ ಸಭೆಯಲ್ಲಿ ಲ್ಯಾಪ್ ಟಾಪ್ ಖರೀದಿಗೆ, ಅನುದಾನದ ಉದ್ದೇಶ ಉಲ್ಲಂಘಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಾಲಿಕೆಯಲ್ಲಿ ಅವೈಜ್ಞಾನಿಕ ಬಜೆಟ್ ಮಂಡನೆ ಮಾಡಲಾಗ್ತಿದೆ ಎಂಬ ಬಗ್ಗೆ ಹಿಂದೊಮ್ಮೆ ಪತ್ರ ಬರೆದಿದ್ದ ಆಯುಕ್ತರು, ಈಗ ಮತ್ತೆ ಅದೇ ವಿಚಾರ ಪ್ರಸ್ತಾಪಿಸಿದ್ದಾರೆ. ಬಜೆಟ್ನಲ್ಲಿ ಉಲ್ಲೇಖಿಸಿದ ಅಷ್ಟೂ ಯೋಜನೆಗಳಿಗೆ ಕಾಮಗಾರಿ ಸಂಖ್ಯೆ ನೀಡಲಾಗ್ತಿದೆ. ಇದರಿಂದ ಪ್ರತಿವರ್ಷ ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ.
ಒಟ್ಟು 3,944.18 ಕೋಟಿ ಬಿಲ್ ಪಾವತಿ ಬಾಕಿ ಇದೆ. ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ 286 ಕೋಟಿ ರೂ ಸಾಲ ಇದೆ. ಈ ವರ್ಷ ಆದಾಯ ಸಂಗ್ರಹವೂ ಕುಸಿಯುತ್ತಿರೋದ್ರಿಂದ ಆರ್ಥಿಕ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ಪತ್ರದ ಮೂಲಕ ಗಮನಕ್ಕೆ ತಂದಿದ್ದಾರೆ.