ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿನ್ನೆ ಅಸ್ತಿತ್ವಕ್ಕೆ ಬಂದಿದೆ. ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. ಹಂಗಾಮಿ ಸ್ಪೀಕರ್ ಆಗಿ ಹಿರಿಯ ಶಾಸಕ ವಿ. ಆರ್. ದೇಶಪಾಂಡೆ ಅವರನ್ನು ನೇಮಿಸಲಾಗಿದೆ. ಆದರೆ, ಹೊಸ ಮತ್ತು ಕಾಯಂ ಸ್ಪೀಕರ್ ಸ್ಥಾನದ ಜವಾಬ್ದಾರಿಯನ್ನು ಹಿರಿಯ ಕಾಂಗ್ರೆಸ್ ನಾಯಕರು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಕಾರಣ ಆ ಹುದ್ದೆಗೆ ಅಂಟಿಗೊಂಡಿರುವ ಭಯ ಎನ್ನಲಾಗುತ್ತಿದೆ.
ಹೌದು, 2004ರಿಂದ ಸಾಂವಿಧಾನಿಕ, ಪ್ರತಿಷ್ಠಿತ ಹುದ್ದೆಯಲ್ಲಿ ಕುಳಿತವರು ತಮ್ಮ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಸ್ಪೀಕರ್ ಆಗಿರುವ ನಾಯಕರು ನಿರಂತರವಾಗಿ ಚುನಾವಣೆಯಲ್ಲಿ ಸೋತಿದ್ದಾರೆ. ಇದರಿಂದ ಅವರ ರಾಜಕೀಯ ಜೀವನವೂ ಕೊನೆಗೊಂಡಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೋಲಿನೊಂದಿಗೆ ಈ ಆತಂಕ ಮುಂದುವರಿದಿದೆ. ಕಾಗೇರಿ ಅವರ ಸೋಲು ಪಕ್ಷಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಸ್ವತಃ ಕಾಗೇರಿ ಅವರೇ ಈ ಸೋಲಿನಿಂದ ಕಂಗಾಲಾಗಿದ್ದಾರೆ. ಪ್ರಬಲ ನಾಯಕರಾಗಿದ್ದ ಅವರಿಗೆ ತಮ್ಮ ಶಕ್ತಿಯ ಮೇಲೆಯೇ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ಯಾರಿಗೆಲ್ಲ ಹಿನ್ನಡೆ?: 2004ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಆರ್.ಪೇಟೆ ಕ್ಷೇತ್ರದ ಕೃಷ್ಣ ಅವರು 2008ರ ಚುನಾವಣೆಯಲ್ಲಿ ಸೋತರು. 2013ರಲ್ಲಿ ಸ್ಪೀಕರ್ ಹುದ್ದೆ ಅಲಂಕರಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರು 2018ರ ಚುನಾವಣೆಯಲ್ಲಿ ಸೋಲು ಕಂಡರು. ಐದು ಬಾರಿ ಆಯ್ಕೆಯಾಗಿದ್ದ ಹಿರಿಯ ಶಾಸಕ ಕೆ. ಬಿ. ಕೋಳಿವಾಡ 2016ರಲ್ಲಿ ಸ್ಪೀಕರ್ ಆಗಿದ್ದರು. ಅವರು ಸಹ 2018ರಲ್ಲಿ ಚುನಾವಣೆಯಲ್ಲಿ ಪರಭಾವಗೊಂಡರು. ನಂತರದ 2019ರ ಉಪ ಚುನಾವಣೆಯಲ್ಲೂ ಕೋಳಿವಾಡ ಸೋಲು ಕಂಡರು.
ಇದನ್ನೂ ಓದಿ: 'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ
2018ರಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಹ ಈ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಇವರ ನಂತರ ಬಿಜೆಪಿ ಸರ್ಕಾರದಲ್ಲಿ ಕಾಗೇರಿ ಸ್ಪೀಕರ್ ಆಗಿದ್ದರು. ಈ ಮೂಲಕ ಐದು ವರ್ಷದ ಅವಧಿಯಲ್ಲಿ ಸ್ಪೀಕರ್ಗಳಿದ್ದ ಇಬ್ಬರು ಸೋತಿದ್ದಾರೆ. ಅಲ್ಲದೇ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಕಾರ್ಯ ನಿರ್ವಹಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಕೆ.ಜಿ. ಬೋಪಯ್ಯ ಕೂಡ ಇತ್ತೀಚೆಗೆ ಮುಗಿದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಹಿನ್ನಡೆಯನ್ನು ಎದುರಿಸಿದ್ದಾರೆ. ಹೀಗಾಗಿ ಈ ಹುದ್ದೆಗೆ ಹಿರಿಯ ಶಾಸಕರನ್ನು ಒಪ್ಪಿಸಲು ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಮೊದಲಿಗೆ ಡಾ. ಜಿ. ಪರಮೇಶ್ವರ ಅವರನ್ನು ಸ್ಪೀಕರ್ ಯೋಜಿಸಲಾಗಿತ್ತು. ಆದರೆ, ಈ ಪ್ರಸ್ತಾಪವನ್ನು ನೇರವಾಗಿ ಅವರು ತಿರಸ್ಕರಿಸಿ ಕ್ಯಾಬಿನೆಟ್ ಸಚಿವರಾದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದೀಗ ಟಿ. ಬಿ. ಜಯಚಂದ್ರ, ಎಚ್.ಕೆ. ಪಾಟೀಲ್, ಬಿ. ಆರ್. ಪಾಟೀಲ್, ವೈ.ಎನ್. ಗೋಪಾಲಕೃಷ್ಣ ಅವರಲ್ಲಿ ಯಾರನ್ನಾದರೂ ಸ್ಪೀಕರ್ ಮಾಡಲು ಪಕ್ಷ ಚಿಂತನೆ ನಡೆಸಿದೆ. ಆದರೆ, ಅವರಲ್ಲಿ ಯಾರೂ ಕೂಡ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಆರ್.ವಿ.ದೇಶಪಾಂಡೆ ವಿಧಾನಸಭೆ ಹಂಗಾಮಿ ಸ್ಪೀಕರ್