ಬೆಂಗಳೂರು: ಮಂತ್ರಿ ಮಾಲ್ ಮಾಲೀಕರು ಬಾಕಿ ಉಳಿಸಿಕೊಂಡಿರುವ ಸುಮಾರು 30 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಮಾರ್ಚ್ 31ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಗಡುವಿನೊಳಗೆ ಪಾವತಿಸದಿದ್ದರೆ ಮಂತ್ರಿ ಮಾಲ್ಗೆ ಬೀಗ ಹಾಕುವುದಾಗಿ ಇತ್ತೀಚೆಗೆ ಪಾಲಿಕೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಮಾಲ್ ಒಳಗಿರುವ ಮಳಿಗೆಗಳಿಗೂ ನೋಟಿಸ್ ನೀಡಲಾಗಿತ್ತು. ಇದೀಗ ಆಸ್ತಿ ತೆರಿಗೆ ಪಾವತಿಸಲು ಗಡುವು ವಿಸ್ತರಿಸಲಾಗಿದ್ದು, ಅಷ್ಟರೊಳಗೆ ಬಾಕಿ ಮೊತ್ತವನ್ನು ಪಾವತಿಸಿದ್ದರೆ, ವಸೂಲಿಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.
ಈಗ ಕಾನೂನು ತಿದ್ದುಪಡಿಯಾಗಿದ್ದು, ಸುಸ್ತಿದಾರರ ಚರಾಸ್ತಿ ಅಷ್ಟೇ ಅಲ್ಲದೆ ಸ್ಥಿರಾಸ್ತಿಯನ್ನೂ ಜಪ್ತಿ ಮಾಡಬಹುದು. ಅಗತ್ಯ ಬಿದ್ದರೆ ಸ್ಥಿರಾಸ್ತಿಯನ್ನು ಹರಾಜು ಹಾಕಲೂ ಅವಕಾಶ ಇದೆ ಎಂದು ತಿಳಿಸಿದ್ದಾರೆ.
240 ಧಾರ್ಮಿಕ ಕಟ್ಟಡಗಳ ತೆರವಿಗೆ ಪಾಲಿಕೆ ಶಿಫಾರಸು
ಸಾರ್ವಜನಿಕ ಜಾಗಗಳಲ್ಲಿ ನಿರ್ಮಾಣ ಮಾಡಿರುವ ಧಾರ್ಮಿಕ ಕಟ್ಟಡಗಳ ಪೈಕಿ 2009ರ ಸೆ. 29ಕ್ಕೆ ಮುನ್ನ ನಿರ್ಮಾಣವಾದ 240 ಕಟ್ಟಡಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಪಾಲಿಕೆ ಶಿಫಾರಸು ಮಾಡಿದೆ. ಒಟ್ಟು 1,893 ಅಕ್ರಮ ಕಟ್ಟಡ ಗುರುತಿಸಲಾಗಿದ್ದು, ಇವುಗಳಲ್ಲಿ ಬಹುತೇಕ ಸಕ್ರಮಗೊಳಿಸಬಹುದು ಹಾಗೂ ಸ್ಥಳಾಂತರ ಮಾಡಬಹುದಾಗಿದೆ. ಆದರೆ 240 ಕಟ್ಟಡಗಳನ್ನು ತೆರವು ಮಾಡೋದು ಅನಿವಾರ್ಯವಾಗಿದ್ದು, ಅವರೇ ತೆರವುಗೊಳಿಸದೇ ಹೋದರೆ ಪಾಲಿಕೆಯೇ ತೆರವುಗೊಳಿಸುತ್ತದೆ, ಹೈಕೋರ್ಟ್ಗೂ ಅನುಪಾಲನಾ ವರದಿ ಸಲ್ಲಿಸಬೇಕಿದೆ ಎಂದರು.
ಇದನ್ನೂ ಓದಿ: ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರವಾಗಿ ಕ್ಯಾಶಿಯರ್ ಮೇಲೆ ಪುಂಡರಿಂದ ಹಲ್ಲೆ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ