ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಏರುತ್ತಲೇ ಇದೆ. ಬಿಸಿಲ ತೀವ್ರತೆಗೆ ಜನರೇ ಕಂಗಾಲಾಗಿರುವಾಗ ಇತರೆ ಎಲೆಕ್ಟ್ರಿಕ್ ವಸ್ತುಗಳಿಗೂ ಇದರ ಎಫೆಕ್ಟ್ ನಿಂದ ಪಾರಾಗಲು ಆಗುತ್ತಾ ಅನ್ನೋ ಅನುಮಾನ ಕಾಡುತ್ತೆ. ಅಂದಹಾಗೇ, ಇದೇ ಅವಧಿಯಲ್ಲಿ ಲೋಕಸಭಾ ಚುನಾವಣೆ ಬಂದಿದೆ.
ಈ ಬಾರಿಯೂ ಮತದಾನಕ್ಕೆ ಇವಿಎಂ ವಿವಿ ಪ್ಯಾಟ್ ಬಳಸಲಾಗುತ್ತಿದೆ. ಹಾಗಾಗಿ ಇವಿಎಂ ವಿವಿ ಪ್ಯಾಟ್ ಯಂತ್ರಗಳನ್ನು ಯಾವ ರೀತಿ ಬಳಸಬೇಕು ಎಂಬುದರ ಕುರಿತು ಚುನಾವಣಾ ಆಯೋಗವು ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸುತ್ತಿದೆ.
ಅತೀ ಹೆಚ್ಚಿನ ತಾಪಮಾನ ಇದ್ದರೂ ಇವಿಎಂ ಕೆಲಸ ಮಾಡುತ್ತಾ ಎಂಬ ಅನುಮಾನ ಇತ್ತು. ಇವಿಎಂಗೆ ಹೆಚ್ಚಿನ ಉಷ್ಣಾಂಶ ದಿಂದ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಅಧಿಕಾರಿಗಳು ಸಂಶಯ ಪಟ್ಟಿದ್ದರು. ಆದರೆ ಅದೆನ್ನಲ್ಲ ಅಲ್ಲಗಳೆದಿದ್ದು, ಎಷ್ಟೇ ತಾಪಮಾನವಿದ್ದರೂ ಇವಿಎಂ ಜಗ್ಗೋದಿಲ್ಲ ಅಂತಾರೆ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ವೆಂಕಟೇಶ್..
ಇನ್ನು ಇವಿಎಂ ಮತ್ತು ವಿವಿ ಪ್ಯಾಟ್ ಎರಡೂ ಕೂಡ ಅತಿ ಹೆಚ್ಚು ತಾಪಮಾನವಿರುವ ರಾಜಸ್ಥಾನ ಮತ್ತು ಅತಿ ಕಡಿಮೆ ಉಷ್ಣಾಂಶವಿರುವ ಜಮ್ಮು ಮತ್ತು ಕಾಶ್ಮೀರದಲ್ಲೂ ಪರೀಕ್ಷೆ ನಡೆಸಲಾಗಿದೆ. ಅಲ್ಲೂ ಕೂಡ ಇದು ಸುರಕ್ಷಿತವಾಗಿ ಕೆಲಸ ಮಾಡಲಿದೆಯಂತೆ.
ಇವಿಎಂ ಹ್ಯಾಕ್ ಆಗುವ ಚಾನ್ಸೇ ಇಲ್ಲ:
ವಿದ್ಯುನ್ಮಾನ ಮತಯಂತ್ರಗಳನ್ನು ಯಾವುದೇ ರೀತಿಯಲ್ಲೂ ಹ್ಯಾಕ್ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಇವಿಎಂ ಬಗ್ಗೆ ಈ ಹಿಂದೆ ಆರೋಪ ಕೇಳಿ ಬಂದಿದ್ದವು. ಆದರೆ ಆರೋಪ ಸಾಬೀತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಪರಿಶೀಲನೆ ಮಾಡಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಸಿದ್ಧಪಡಿಸಿದೆ. ಇವಿಎಂ ಸ್ವತಂತ್ರ ಯಂತ್ರವಾಗಿದ್ದು, ಯಾವುದೇ ಇತರೆ ಡಿವೈಸ್ಗಳು ಅಂದರೆ ಬ್ಲೂ ಟೂತ್, ವೈ ಫೈ, ಇಂಟರ್ನೆಟ್ ಕನೆಕ್ಷನ್ ಯಾವುದನ್ನೂ ಕನೆಕ್ಟ್ ಮಾಡಲು ಸಾಧ್ಯವಿಲ್ಲ. ಯಾವುದೇ ರೀತಿಯಲ್ಲೂ ಹ್ಯಾಕ್, ಟ್ಯಾಂಪರಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ ಅಂತಾರೆ ಮುಖ್ಯ ಉಪ ಚುನಾವಣಾಧಿಕಾರಿ ರಾಘವೇಂದ್ರ.
ಈ ಹಿಂದೆಯೂ ಇವಿಎಂ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ಉದಾಹರಣೆ ಇದೆ. ಆದರೆ, ಅಲ್ಲೂ ಇವಿಎಂ ಮತ್ತು ವಿವಿ ಪ್ಯಾಟ್ಗೆ ಜಯ ಸಿಕ್ಕಿದೆ. ತಾಂತ್ರಿಕವಾಗಿಯೂ ಉನ್ನತ ಶ್ರೇಣೆಯಲ್ಲಿದ್ದು, ಬಳಕೆಗೆ ಯೋಗ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.