ಬೆಂಗಳೂರು: ಕೊರೊನಾ ವಿಚಾರದಲ್ಲಿ ಇಡೀ ದೇಶವೇ ಸರ್ಕಾರವನ್ನು ಬೆಂಬಲಿಸಿದೆ. ಆದರೆ ರಾಜ್ಯದಲ್ಲಿ ಕಾಣುವ ಪ್ರತಿಯೊಂದು ಖರೀದಿಯಲ್ಲೂ ಅಕ್ರಮ ಕಾಣಿಸುತ್ತಿದೆ. ಇದು ಕೇವಲ 10, 20ರಷ್ಟು ಅಲ್ಲ, 200ರಷ್ಟು, 500ರಷ್ಟು ಹೆಚ್ಚಾಗಿರುವುದು ಕಂಡು ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ವೈದ್ಯ ಘಟಕದ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಎಲ್ಲಾ ಮಾಧ್ಯಮಗಳು ಸರ್ಕಾರದ ಅಕ್ರಮವನ್ನು ದಾಖಲೆ ಸಮೇತ ನೀಡುತ್ತಿವೆ. ಇದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಜವಾಬ್ದಾರರಾಗಿದ್ದಾರೆ. ಇವರು ಉತ್ತರ ನೀಡಬೇಕು, ದಾಖಲೆ ಒದಗಿಸಬೇಕೆಂದು ಆಗ್ರಹಿಸುತ್ತೇನೆಂದರು.
ಉತ್ತರ ಕೊಡಿ ಮುಖ್ಯಮಂತ್ರಿಗಳೇ ಎಂದು ಪ್ರತಿಪಕ್ಷದ ನಾಯಕರು ಪ್ರಶ್ನಿಸುತ್ತಿದ್ದೇವೆ. ಅದಕ್ಕೆ ಉತ್ತರ ನೀಡಲೇಬೇಕು. ಸಾಕಷ್ಟು ಆರ್ಥಿಕ ಸಂಕಷ್ಟ ದೇಶಕ್ಕೆ ಎದುರಾಗಿದೆ. ಈ ಸಂದರ್ಭ ಭ್ರಷ್ಟಾಚಾರ ನಡೆಸುತ್ತಿರುವುದು ಎಷ್ಟು ಸರಿ?. ಆರೋಗ್ಯದ ವಿಚಾರದಲ್ಲಿ ಯಾವುದೇ ಅಕ್ರಮ ನಡೆಸುವುದು ಸರಿಯಲ್ಲ. ನಾನು ತಮಿಳುನಾಡಿನಲ್ಲಿ ಆರೋಗ್ಯ ಸಲಕರಣೆ ಕೊಂಡಿರುವುದರ ಮಾಹಿತಿ ಸಂಗ್ರಹಿಸಿದ್ದೇನೆ. ಹಾಸಿಗೆ ಸೇರಿದಂತೆ ಎಲ್ಲಾ ವಿಚಾರದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದರು.
ಬಿಎಸ್ವೈ ಸಂಪುಟದ ಪ್ರತಿಯೊಬ್ಬ ಸಚಿವರು ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಪ್ರಾಮಾಣಿಕ ತನಿಖೆ ನಡೆಸುವುದು ನಿಮ್ಮ ಜವಾಬ್ದಾರಿ. ಎಷ್ಟು ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಪತ್ತೆ ಮಾಡಿ. ಯಾವುದೇ ಸಚಿವರು ಆಸ್ಪತ್ರೆಗೆ ತೆರಳುತ್ತಿಲ್ಲ. ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿಲ್ಲ. ಕೇವಲ ಭ್ರಷ್ಟಾಚಾರದ ಮುದ್ರಣ ಯಂತ್ರಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ ಸುರೇಶ್, ಡಾ. ವನಿತಾ, ಡಾ. ರವೀಂದ್ರ, ಡಾ.ಭಗವಾನ್ ಇತರರು ಹಾಜರಿದ್ದರು.