ಬೆಂಗಳೂರು: ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. 2016-17ನೇ ಶೈಕ್ಷಣಿಕ ಸಾಲಿನಿಂದ ಆರ್.ಟಿ.ಇ ಕಾಯ್ದೆ ಅಡಿಯಲ್ಲಿ ಅನುದಾನರಹಿತ ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಎಲ್.ಕೆ.ಜಿ ತರಗತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಆಗಿರಬೇಕು. 1ನೇ ತರಗತಿಗೆ ಮಕ್ಕಳನ್ನು ಸೇರಿಸಲು ಕನಿಷ್ಠ 6ವರ್ಷ ಆಗಿರಬೇಕು, ಗರಿಷ್ಠ 7 ವರ್ಷ ವಯೋಮಿತಿಯನ್ನು ನಿಗದಿಪಡಿಸಿ ನೂತನ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪೂರ್ವ ಪ್ರಾಥಮಿಕ ( ಎಲ್.ಕೆ.ಜಿ ) ಹಾಗೂ ಪ್ರಾಥಮಿಕ ಶಾಲೆಯ 1ನೇ ತರಗತಿ ಮಕ್ಕಳನ್ನು ದಾಖಲಾತಿ ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆ - 1983ರ ನಿಯಮ -20 ರನ್ವಯ ಆಯಾ ಶೈಕ್ಷಣಿಕ ವರ್ಷದ ಜೂ.1 ಕ್ಕೆ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ ) 3 ವರ್ಷ 10 ತಿಂಗಳು, 1 ನೇ ತರಗತಿಗೆ 5 ವರ್ಷ 10 ತಿಂಗಳು ಎಂಬುದಾಗಿ 2017 ರ ಜ.13ರಲ್ಲಿ ವಯೋಮಿತಿಯನ್ನು ನಿಗದಿಪಡಿಸಿದ್ದರು. ಅದೇ ತಿಂಗಳ 18 ರಂದು ಆದೇಶವನ್ನು ಮಾರ್ಪಡಿಸಿ ಶೈಕ್ಷಣಿಕ ವರ್ಷ 2018-19ನೇ ಸಾಲಿನಿಂದ ಸರ್ಕಾರಿ, ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಸಂಬಂಧಿಸಿದ ಶೈಕ್ಷಣಿಕ ವರ್ಷದ ಜೂನ್ 1 ರಂದು 5 ವರ್ಷ, 10 ತಿಂಗಳು ಪೂರ್ಣಗೊಂಡಿರಬೇಕೆಂದು ನಿಗದಿಪಡಿಸಿದ್ದರು.
2009ರಲ್ಲಿ ಆರ್.ಟಿ.ಇ. ಕಾಯ್ದೆ ಮತ್ತು 2012 ರಲ್ಲಿ ಕಡ್ಡಾಯ ಶಿಕ್ಷಣ ನಿಯಮಗಳು ಜಾರಿಗೆ ಬಂದಿವೆ. ಇವುಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ಎಲ್ಲಾ ನಿಯಮಗಳನ್ನು / ಆದೇಶಗಳನ್ನು ರದ್ದುಪಡಿಸಿ, ಈ ಹೊಸ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ: ಜನರಿಗೆ ಸಿಗಲಿದೆಯಾ ಬಂಪರ್ ಕೊಡುಗೆ!?
2018 ರ ಮೇ ತಿಂಗಳಲ್ಲಿ ಹೊರಡಿಸಿದ ಆದೇಶದಲ್ಲಿ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಕನಿಷ್ಠ ವಯೋಮಿತಿಯನ್ನು 05 ವರ್ಷ 05 ತಿಂಗಳು ಹಾಗೂ ಗರಿಷ್ಠ 07 ವರ್ಷಗಳಿಗೆ ನಿಗದಿಪಡಿಸಲಾಗಿದೆ. ತತ್ಸಂಬಂಧಿ ರಾಜ್ಯ ಪತ್ರವನ್ನು ಹಾಗೂ ಸರ್ಕಾರದ ಆದೇಶವನ್ನು 2020 ರ ಮಾ. 20ರಲ್ಲಿ ಶೈಕ್ಷಣಿಕ ವರ್ಷದ ಜೂ.1ರಂದು ಅನ್ವಯವಾಗುವಂತೆ ಎಲ್.ಕೆ.ಜಿ. ದಾಖಲಾತಿ ಹೊಂದಲು 03 ವರ್ಷ 05 ತಿಂಗಳು ಹಾಗೂ ಒಂದನೇ ತರಗತಿಗೆ 05 ವರ್ಷ 05 ತಿಂಗಳು ವಯೋಮಿತಿ ನಿಗದಿಪಡಿಸಲಾಗಿತ್ತು. ಒಟ್ಟಾರೆ ಸಲ್ಲಿಕೆಯಾದ ಎಲ್ಲಾ ಪ್ರಸ್ತಾವನೆಯನ್ನು ಕೂಲಂಕಶವಾಗಿ ಪರಿಶೀಲಿಸಿ ಈ ನೂತನ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.