ಬೆಂಗಳೂರು: ರಾಜ್ಯ ಪರಿಸರ ಮಾಲಿನ್ಯ ಮಂಡಳಿ ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಹಾಗೂ ಉದ್ದಿಮೆಗಳಿಂದಾಗುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಾಲಿನ್ಯ ತಪಾಸಣೆ ಮಾಡಲು 3 ತುರ್ತು ಸ್ಪಂದನ ವಾಹನಗಳನ್ನು ನಿಯೋಜನೆ ಮಾಡಿದೆ. ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್ ವಿಧಾನಸೌಧದ ಆವರಣದಲ್ಲಿ ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನದಿಯ ಕಣಿವೆ ಪ್ರದೇಶದಲ್ಲಿ ಮಾಲಿನ್ಯ ತಡೆಗಟ್ಟುವಂತೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಬೆಂಗಳೂರು ನಗರದಲ್ಲಿ ವೃಷಭಾವತಿ ಕಣಿವೆ ಸೇರಿದಂತೆ ಇತರೆಡೆ ಅಧಿಕ ಪ್ರಮಾಣದಲ್ಲಿ ಕೈಗಾರಿಕೆ ತ್ಯಾಜ್ಯದಿಂದ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಸಹ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳೆದ 8 ತಿಂಗಳಿಂದ ಶಾಶ್ವತ ಅಧ್ಯಕ್ಷರಿಂದ ಅವರನ್ನು ಸಹ ತ್ವರಿತವಾಗಿ ನೇಮಕ ಮಾಡಬೇಕಾಗಿದೆ ಎಂದರು.
ತುರ್ತು ಸ್ಪಂದನೆ ವಾಹನಗಳ ಕಾರ್ಯವೈಖರಿ ಹೇಗೆ?: ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ ತಡೆಗಟ್ಟಲು ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳು, ಸಾಮಾನ್ಯ ತ್ಯಾಜ್ಯ ಘಟಕಗಳು ಮತ್ತು ಕೈಗಾರಿಕೆ ತಪಾಸಣೆ ಕಾರ್ಯ ಮಾಡಲು ಅಧಿಕಾರಿಗಳ ತಂಡವನ್ನು ರಚಿಸಿದ್ದು, ಈ ಅಧಿಕಾರಿಗಳು ತುರ್ತು ಸ್ಪಂದನ ವಾಹನಗಳ ಮೂಲಕ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಮಾಲಿನ್ಯ ತಡೆಗಟ್ಟಲು ಅಭಿಯಾನವನ್ನು ಆಯೋಜಿಸಲಾಗಿದೆ.
ಕಾರ್ಯ ಯೋಜನೆಯೊಂದಿಗೆ ಅಂತಿಮ ವರದಿ: ತಪಾಸಣೆಗೆ ತೆರಳುವ ಪ್ರತಿಯೊಂದು ವಾಹನಕ್ಕೆ ತಲಾ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬೆಂಗಳೂರು ಉತ್ತರ ವಲಯದ ಹಿರಿಯ ಪರಿಸರ ಅಧಿಕಾರಿ ಸಿ. ಸಿದ್ದರಾಮಯ್ಯ ಅವರನ್ನು ವಿಶೇಷ ತಪಸಣಾ ಅಭಿಯಾನದ ಸಮನ್ವಯ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಈ ಅಭಿಯಾನದ ಕೊನೆಯಲ್ಲಿ “ನೀರಿ” (ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ) ನೀಡಿರುವ ಸಲಹೆಗಳಿಗೆ ಸಂಬಂಧಪಟ್ಟಂತೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಅನುಷ್ಠಾನಗೊಳಿಸಿ ನಿರ್ದಿಷ್ಟ ಶಿಫಾರಸ್ಸುಗಳು ಹಾಗೂ ಕಾರ್ಯ ಯೋಜನೆಯೊಂದಿಗೆ ಅಂತಿಮ ವರದಿ ಸಲ್ಲಿಸಲಿದ್ದಾರೆ.
ಕಣಿವೆ ವ್ಯಾಪ್ತಿಯಲ್ಲಿ ಸರ್ವೆ: ರಾಜ್ಯ ಹೈಕೋರ್ಟ್ ರಿಟ್ ಖಟ್ಲೆ ಸಂಖ್ಯೆ 6961/2020ರ ವಿಚಾರಣೆಯ ಭಾಗವಾಗಿ ವೃಷಭಾವತಿ ನದಿ ಕಣಿವೆ ವ್ಯಾಪ್ತಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ‘ನೀರಿ’ (ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ) ಸಲ್ಲಿಸಿದ್ದ ವರದಿಯನ್ನು ಪರಿಗಣಿಸಿ, ಅದರಲ್ಲಿ ನೀಡಲಾಗಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಇದೇ ವೇಳೆ, ಕಣಿವೆ ವ್ಯಾಪ್ತಿಯಲ್ಲಿ ಸರ್ವೆಯನ್ನು ನಡೆಸುವಂತೆಯೂ ಸೂಚಿಸಿದೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಪರಿಸರ ಮಾಲಿನ್ಯ ಮಂಡಳಿಯು ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಮಾಲಿನ್ಯ ತಪಾಸಣೆ ಅಭಿಯಾನವನ್ನು ಕೈಗೊಂಡಿದೆ.
ಇದನ್ನೂ ಓದಿ: ಮೈತ್ರಿ ಸರ್ಕಾರ ಕೆಡವಿದ 17 ಜನ ನನ್ನ ಜೀವ ಉಳಿಸಿದ ಪುಣ್ಯಾತ್ಮರು: ಹೆಚ್.ಡಿ. ಕುಮಾರಸ್ವಾಮಿ