ಬೆಂಗಳೂರು : ರಾಜ್ಯ ಸರ್ಕಾರ ಜುಲೈ 14ರ ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರು ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಅವರ ಆದೇಶಾನುಸಾರ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಸ್ ಹೊರಡಿಸಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಯಾವುದೇ ಅರ್ಜಿಗಳ ಫಿಸಿಕಲ್ ಫೈಲಿಂಗ್ಗೆ ಅವಕಾಶ ಇರಲ್ಲ. ಆದರೆ, ಕೇವಿಯಟ್ ಅರ್ಜಿಗಳಿಗೆ ಫಿಸಿಕಲ್ ಫೈಲಿಂಗ್ ಮಾಡಲು ಮತ್ತು ಕೋರ್ಟ್ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
ಹಾಗೆಯೇ, ಅತಿ ತುರ್ತು ಪ್ರಕರಣಗಳ ಕುರಿತ ಅರ್ಜಿಗಳನ್ನಷ್ಟೇ ಇ-ಫೈಲಿಂಗ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿದೆ. ಅವುಗಳನ್ನು ಮಾತ್ರವೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.