ಬೆಂಗಳೂರು: ಕಳವಾಗಿದ್ದ 48 ಲಕ್ಷ ರೂ. ಮೌಲ್ಯದ ಪಾನ್ ಮಸಾಲ ಲೋಡ್ ಇದ್ದ ಕ್ಯಾಂಟರ್ ವಾಹನವನ್ನು ಚಂದ್ರಾಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳ್ಳತನ ಮಾಡಿದ್ದ ಮೂವರು ಖದೀಮರ ಬಗ್ಗೆ ಸುಳಿವು ದೊರೆತಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ವಿಲ್ಸನ್ ಗಾರ್ಡನ್ನಲ್ಲಿರುವ ಗೋದಾಮಿನಿಂದ ರಾಯಚೂರಿನ ಸಿಂಧಗಿಗೆ 48 ಲಕ್ಷ ಮೌಲ್ಯದ ಪಾನ್ ಮಸಾಲ ಹೊತ್ತುಕೊಂಡು ಕ್ಯಾಂಟರ್ ಮೇ 20ರಂದು ಪ್ರಯಾಣ ಬೆಳೆಸಿತ್ತು. ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ಹೋಗುವಾಗ ಆಟೋದಲ್ಲಿ ಬಂದ ಮೂವರು ಅಪರಿಚಿತರು ತಮ್ಮ ಗಾಡಿ ಆಕ್ಸಿಡೆಂಟ್ ಮಾಡಿದ್ದೀಯಾ ಎಂದು ಕ್ಯಾಂಟರ್ ಚಾಲಕನನ್ನು ತಡೆದಿದ್ದಾರೆ.
ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿ ಏಕಾಏಕಿ ಆಟೋದಲ್ಲಿ ಆತನನ್ನು ಅಪಹರಿಸಿದ್ದಾರೆ. ದಾರಿ ಮಧ್ಯೆ ಹೇಗೋ ಅಪಹರಣಕಾರರಿಂದ ತಪ್ಪಿಸಿಕೊಂಡ ಚಾಲಕ ಸ್ನೇಹಿತರಿಗೆ ಕರೆಯಿಸಿ ವಿಷಯ ತಿಳಿಸಿದ್ದಾನೆ. ಸ್ನೇಹಿತರ ನೆರವಿನಿಂದ ಅಪಹರಿಸಿದ್ದ ಜಾಗಕ್ಕೆ ಹೋಗಿ ನೋಡಿದಾಗ 48 ಲಕ್ಷ ಮೌಲ್ಯದ ಪಾನ್ ಮಸಾಲ ಹಾಗೂ 3 ಲಕ್ಷ ಬೆಲೆಯ ಕ್ಯಾಂಟರ್ ವಾಹನ ಸಮೇತ ಕಳುವಾಗಿತ್ತು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಾಹನ ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಮಾಲು ತುಂಬಿರುವ ಕ್ಯಾಂಟರ್ ವಾಹನವನ್ನು ಕಾಟನ್ ಪೇಟೆ ಬಳಿ ಮೈದಾನದಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಅಲ್ಲದೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಿಲೇವಾರಿ ಮಾಡಲು ಹಗಲು ಹೊತ್ತಿನಲ್ಲಿ ಕಷ್ಟಕರ ಹಾಗೂ ಲಾಕ್ಡೌನ್ ಹಿನ್ನೆಲೆ ಹೆಜ್ಜೆ - ಹೆಜ್ಜೆಗೂ ಪೊಲೀಸರ ತಪಾಸಣೆ ಮಾಡಲಿದ್ದಾರೆ ಎಂದು ಅರಿತ ಆರೋಪಿಗಳು ಒಂದು ಕಡೆ ಗಾಡಿ ನಿಲ್ಲಿಸಿದ್ದಾರೆ.
ರಾತ್ರಿ ವೇಳೆ ವಿಲೇವಾರಿ ಯೋಜನೆಯ ಸಂಚು ರೂಪಿಸಿಕೊಂಡಿದ್ದಾರೆ. ಆದರೆ, ಪ್ರಕರಣರದ ತನಿಖೆ ಕೈಗೊಂಡಿದ್ದ ಪೊಲೀಸರು ಸ್ಥಳೀಯವಾಗಿ ಅಳವಡಿಸಿದ್ದ ಸಿಸಿಟಿವಿ ಆಧರಿಸಿ ಪರಿಶೀಲಿಸಿ ಗಾಡಿ ಪತ್ತೆ ಹಚ್ಚಿದ್ದಾರೆ. ಈಗಾಗಲೇ ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓದಿ: ಕಲಾವಿದನ ಸಂದೇಶ: ಧಾರವಾಡದಲ್ಲಿ ಗೋಡೆ ಬರಹದ ಮೂಲಕ ಕೊರೊನಾ ಜಾಗೃತಿ