ಬೆಂಗಳೂರು: ಯಾವುದೇ ಶಾಲೆಯಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ಕೊರೊನಾ ಸೋಂಕು ಹರಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವತ್ತು ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಸಚಿವರ ಜೊತೆಗೆ ಸಭೆ ಮಾಡಿದ್ದೇವೆ. ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು, ಸದಸ್ಯರು ಇದ್ರು. ನವೆಂಬರ್ನಲ್ಲಿ ಸಭೆ ಮಾಡಿ ತರಗತಿ ಪ್ರಾರಂಭ ಮಾಡುವ ಬಗ್ಗೆ ಚರ್ಚಿಸಿದ್ದೆವು. ಅವರು ಡಿಸೆಂಬರ್ನಲ್ಲೇ ಬೇಡ ಎಂದಿದ್ರು. ಡಿಸೆಂಬರ್ 8ರಂದು ಮತ್ತೆ ಸಭೆ ಮಾಡಿದ್ದೆವು. ಆ ಸಭೆಯ ನಿರ್ಧಾರದ ಮೇಲೆ ಹೊಸ ವರ್ಷದ ಮೊದಲ ದಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭ ಮಾಡಿದೆವು. ಜೊತೆಗೆ ವಿದ್ಯಾಗಮ ಆರಂಭ ಮಾಡಿದೆವು. ದ್ವಿತೀಯ ಪಿಯುಸಿ ಶೇ. 75 ಹಾಜರಾತಿ ಇದೆ. ಎಸ್ಎಸ್ಎಲ್ಸಿ ಶೇ. 70ರಷ್ಟು ಹಾಗೂ ವಿದ್ಯಾಗಮ ಶೇ. 40ರಷ್ಟು ಹಾಜರಾತಿ ಇದೆ ಎಂದರು.
ಭೌತಿಕವಾಗಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿದೆ. ರಾಜ್ಯದ ಬಹುತೇಕ ಮಕ್ಕಳ ಜೊತೆಗೆ ಮಾತಾಡಿದ್ದೇನೆ. ಆಫ್ಲೈನ್ನಲ್ಲಿ ನಮಗೆ ಸಹಕಾರಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ವಿದ್ಯಾಗಮ ನಿಲ್ಲಿಸಬೇಡಿ ಎಂದು ಕೂಡ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ವಿದ್ಯಾಗಮದಲ್ಲಿ ದಿನ ಬಿಟ್ಟು ದಿನ ಬರುವಂತೆ ಮಾಡಿದ್ದೇವೆ. ನಿರಂತರವಾಗಿ ನಡೆಸಬೇಕು ಎಂದು ಎಸ್ಡಿಎಂಸಿ ಮತ್ತು ಪೋಷಕರು ಹೇಳಿದ್ದಾರೆ ಎಂದರು.
8ನೇ ತರಗತಿಯ ನಂತರ ಬಹುತೇಕ ವಿದ್ಯಾರ್ಥಿಗಳು ಕೂಲಿ ಕೆಲಸಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಇವರನ್ನು ಕರೆದುಕೊಂಡು ಬರುವುದು ನಮ್ಮ ಸವಾಲಾಗಿದೆ ಎಂದ ಸುರೇಶ್ ಕುಮಾರ್, ಎರಡು ವರದಿ ಗಮನಿಸಿದ್ದೇನೆ, ಶಿಕ್ಷಣ ತಜ್ಞರು ಪತ್ರ ಬರೆದಿದ್ದಾರೆ. ಹೈಸ್ಕೂಲ್ ಪ್ರಾರಂಭ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೊಂದು ಬೆಳಗಾವಿ ರಿಪೋರ್ಟ್ ಇದೆ. ಎರಡು ಸಾವಿರ ಪ್ರೈಮರಿ ಶಾಲೆ ಓಪನ್ ಮಾಡಲು ಅವಕಾಶ ಕೇಳಿದ್ದಾರೆ. ಶಿಕ್ಷಣ ಇಲಾಖೆಗೆ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರು ಎಂದ ಅಭಿಪ್ರಾಯ ಇದೆ ಎಂದು ತಿಳಿಸಿದರು.
ಕೇರಳದಲ್ಲಿ ವಿಪರೀತ ಸೋಂಕು ಹೆಚ್ಚಾಗಿದೆ. ಒಂದು ದಿನ ಆ ರಾಜ್ಯ ಮಾದರಿಯಾಗಿತ್ತು. ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಕೆಲವು ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಸಿಂಗಲ್ ಡಿಜಿಟ್ಗೆ ಬಂದಿದೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಯಶಸ್ವಿ ಆಗಿತ್ತು. ಅದಕ್ಕೆ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಕೇಳಿದ್ದೇವೆ. ಶಾಲೆ ಹೇಗೆ ನಡೆಯುತ್ತಿದೆ. ಶಿಕ್ಷಕರು ಎಸ್ಒಪಿ ಹೇಗೆ ನಿರ್ವಹಣೆ ಮಾಡುತ್ತಾರೆ ಎಂದು ಗಮನಿಸಿದ್ದೇವೆ. ಎಲ್ ಕೆ ಜಿ, ಯು ಕೆ ಜಿ ಬಗ್ಗೆ ಚರ್ಚೆ ಆಗಿಲ್ಲ. ಪೋಷಕರಿಗೆ ಭಯ ಇದೆ, ಮಕ್ಕಳನ್ನು ಹೊರಗೆ ಕಳಿಸುತ್ತಿಲ್ಲ ಎಂದು ವಿವರಿಸಿದರು.
ಶುಲ್ಕ ನಿಗದಿಗೆ ಬೇರೆ ತಾಂತ್ರಿಕ ಸಲಹಾ ಸಮಿತಿ ಬೇಕಾಗಿದೆ. ಸಿಎಂ ಜೊತೆಗೆ ಕೂತು ಫೈನಲ್ ಆಗಿ ನಿರ್ಧಾರ ಮಾಡುತ್ತೇವೆ. ಪೋಷಕರ ಜೊತೆಗೆ ನಾವು ಸದಾ ನಿಂತಿದ್ದೇವೆ. ಫೀಸ್ ತೆಗೆದುಕೊಳ್ಳಬಾರದು ಎಂದು ಮೊದಲು ಹೇಳಿದ್ದೆವು. ಆ ನಂತರ ಒನ್ ಟೈಮ್ ದಾಖಲಾತಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದೆವು. ಸಮತೋಲನಕ್ಕೋಸ್ಕರ ಪೋಷಕರ ಜೊತೆಗೆ ನಾವು ಇರುತ್ತೇವೆ. ಅವರು ಹೋರಾಟ ಮಾಡದ ಹಾಗೆ ನೋಡಿಕೊಳ್ಳುತ್ತೇವೆ ಎಂದರು.