ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಸೋಲಿಲ್ಲದ ಸರದಾರ ಎಂದೇ ಕರೆಸಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಪರಾಭವಗೊಳಿಸಿದ ಡಾ. ಉಮೇಶ ಜಾಧವ್ ಅವರಿಗೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಖರ್ಗೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದರೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಬೇಕೆನ್ನುವ ಷರತ್ತು ಮುಂದಿಟ್ಟು ಉಮೇಶ ಜಾಧವ್ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು. ಹಾಗಾಗಿ ಅವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಮಂತ್ರಿಗಿರಿ ನೀಡುವುದಾಗಿ ಮಾತು ಕೊಟ್ಟಿರುವ ಬಿಜೆಪಿಗೆ ಇದು ಅನಿವಾರ್ಯವೂ ಆಗಿದೆ.
ಚಿಂಚೋಳಿಯ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಾಗಿದ್ದರು. ಖರ್ಗೆ ತಮಗೆ ಸಚಿವ ಸ್ಥಾನ ಕೊಡಿಸದೇ ತಮ್ಮ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದ್ದಕ್ಕೆ ಜಾಧವ್ ಅಸಮಾಧಾನಗೊಂಡಿದ್ದರು.
ಖರ್ಗೆ ಬಗ್ಗೆ ಜಾಧವ್ಗಿದ್ದ ಅಸಮಾಧಾನವನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ನಾಯಕರು, ಕಾಂಗ್ರೆಸ್ ತೊರೆದು ತಮ್ಮ ಪಕ್ಷ ಸೇರಲು ಆಹ್ವಾನ ನೀಡಿದ್ದರು. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಕೊಡುವುದಾಗಿಯೂ ಹೇಳಿದ್ದರು. ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸಿದರೆ ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡಲಾಗುವುದೆಂದೂ ಆಪರೇಷನ್ ಕಮಲದ ಸಂದರ್ಭದಲ್ಲಿ ಮಾತುಕತೆ ನಡೆದಿತ್ತೆಂದು ಹೇಳಲಾಗ್ತಿದೆ.
ಜಾಧವ್, ಲಮಾಣಿ ಸಮುದಾಯಕ್ಕೆ ಸೇರಿದವರಾಗಿದ್ದು,ಇದೇ ಕೋಟಾದಲ್ಲಿಯೂ ಅವರಿಗೆ ಸಚಿವ ಹುದ್ದೆ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಚಿಂಚೋಳಿಯ ವಿಧಾನಸಭೆ ಉಪಚುನಾವಣೆಯಲ್ಲಿ ಅವರ ಪುತ್ರ ಡಾ.ಅವಿನಾಶ್ ಜಾಧವ್ ಸಹ ಗೆಲವು ಸಾಧಿಸಿರುವುದು ಜಾಧವ್ಗೆ ಸಚಿವ ಸ್ಥಾನ ದೊರೆಯಲು ದಾರಿ ಸುಗಮಗೊಳಿಸಿದಂತಾಗಿದೆ.