ಬೆಂಗಳೂರು: ಲಘು ರೋಗ ಲಕ್ಷಣ ಇರುವವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿಕೊಂಡಿರುವುದಕ್ಕೆ ಕೆಂಡಾಮಂಡಲರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಂಬಂಧಿಸಿದ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದ್ದಾರೆ.
ಡಾ.ಕೆ.ಸುಧಾಕರ್ ಇಂದಿರಾನಗರದಲ್ಲಿರುವ ಸಿ.ವಿ ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಕೊರೊನಾ ರೋಗಿಗಳ ಚಿಕಿತ್ಸೆ, ಸೌಲಭ್ಯಗಳ ಪರಿಶೀಲನೆ ನಡೆಸಿದ ಅವರು ವೈದ್ಯರು ಸಿಬ್ಬಂದಿಯಿಂದ ಮಾಹಿತಿ ಪಡೆದು ಸಮಾಲೋಚನೆ ನಡೆಸಿದರು. ನಂತರ ಕೊರೊನಾ ರೋಗಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ, ರೋಗಿಗಳ ಮಾಹಿತಿ ಆಧರಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಲಘು ರೋಗಲಕ್ಷಣ ಇರುವವರನ್ನು ದಾಖಲು ಮಾಡಿಕೊಂಡಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
15 ಫ್ಲೋ ಆಕ್ಸಿಜನ್ ಬೆಡ್ ಪೈಕಿ ಎರಡರಲ್ಲಿ ಮಾತ್ರ ರೋಗಿಗಳನ್ನು ದಾಖಲಿಸಿದ್ದಕ್ಕೆ ಕೆಂಡಾಮಂಡಲರಾದ ಅವರು ಸಂಬಂಧಿಸಿದ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್ಗೆ ಹೋಗಬೇಕಿದ್ದವರನ್ನೂ ದಾಖಲು ಮಾಡಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.