ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜಕೀಯ ಪರ್ವದಲ್ಲಿನ ಬದಲಾವಣೆಯ ಹೆಜ್ಜೆಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಮರಿಸಿಕೊಂಡು ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಕಳೆದ ವರ್ಷ, ಈ ದಿನದಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲಿಸಿದ್ದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಲ್ಲಿದೆ ಎಂದು ಪ್ರಶ್ನಿಸಿದ್ದವರಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ. ಸುಸ್ಥಿತ, ಜನಪರ, ಅಭಿವೃದ್ಧಿ ಪರ ಬಿಜೆಪಿ ಸರ್ಕಾರಕ್ಕೆ ಮತ ನೀಡಿದ ಚಿಕ್ಕಬಳ್ಳಾಪುರದ ಮಹಾಜನತೆಗೆ ಧನ್ಯವಾದಗಳು ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ತೆರಳಿದ್ದಾಗ ಅಂದಿನ ಸ್ವ-ಪಕ್ಷೀಯ ನಾಯಕರಿಂದಲೇ ನಡೆದ ಅಹಿತಕರ ಘಟನೆಗಳು ಸೇರಿದಂತೆ ಶಾಸಕ ಸ್ಥಾನದಿಂದ ಅನರ್ಹಗೊಂಡು ಅತಂತ್ರರಾಗಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ರಾಜಕೀಯ ಮರುಹುಟ್ಟು ಪಡೆದು ಜನರ ಮುಂದೆ ಹೋಗಿ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಣೆವರೆಗೂ ತಲುಪಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರ ಅಂದಿನ ಧೋರಣೆಗೆ ಪ್ರತಿಯಾಗಿ ರಾಜಕೀಯ ಯಶಸ್ಸಿನ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.