ಬೆಂಗಳೂರು: ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ವೈದ್ಯರೊಬ್ಬರು ಸಕಾಲದಲ್ಲಿ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಕಾರಣಕ್ಕೆ ಕಾರನ್ನು ಅಲ್ಲಿಯೇ ಬಿಟ್ಟು 3 ಕಿ.ಮೀ ಓಡಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಗಸ್ಟ್ 30 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೈದ್ಯ ಗೋವಿಂದ ನಂದಕುಮಾರ್ ಎಂಬುವವರು ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 30 ರ ಮಂಗಳವಾರ ರೋಗಿಯೊಬ್ಬರಿಗೆ ತುರ್ತು ಲ್ಯಾಪ್ರೋಸ್ಕೋಪಿಕ್ ಗಾಲ್ ಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಹೊರಟಿದ್ದಾಗ ಅವರು ವಿಪರೀತ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಸ್ಥಳದಿಂದ ಆಸ್ಪತ್ರೆ ತಲುಪಲು ಕೇವಲ 10 ನಿಮಿಷ ಸಾಕಾಗಿದ್ದರೂ, ಟ್ರಾಫಿಕ್ ಕಾರಣಕ್ಕೆ ಗೂಗಲ್ ಮ್ಯಾಪ್ನಲ್ಲಿ 45 ನಿಮಿಷ ತೋರಿಸಿದೆ.
ಅಂದು ಬೆಳಗ್ಗೆ 10 ಗಂಟೆಯ ನಿಗದಿತ ಸಮಯಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಉದ್ದೇಶಕ್ಕೆ ಚಾಲಕನಿಗೆ ಕಾರು ಆಸ್ಪತ್ರೆಗೆ ತರಲು ಸೂಚಿಸಿ ತಾವು ಓಡಿಕೊಂಡೇ ಹೋಗಿ ಆಸ್ಪತ್ರೆ ತಲುಪಿದ್ದಾರೆ. ನಿಗದಿತ ಸಮಯಕ್ಕೆ ತಲುಪಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಿದ್ದಾರೆ.
ನಿಯಮಿತ ಜಿಮ್ನಿಂದ ಸಾಧ್ಯವಾದ ಓಟ: ಈ ಕುರಿತು ಮಾತನಾಡಿರುವ ಡಾ.ಗೋವಿಂದ ನಂದಕುಮಾರ್ "ಆ.30 ರ ಬೆಳಗ್ಗೆ 10 ಗಂಟೆಗೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದೆ. ಶಸ್ತ್ರಚಿಕಿತ್ಸೆಗೆ ತಡವಾಗುತ್ತದೆ ಎಂಬ ಆತಂಕವಿತ್ತು. ಬೇರೆ ದಾರಿಯಿಲ್ಲದೇ ನಾನು ಗೂಗಲ್ ಮ್ಯಾಪ್ ನೆರವಿನಿಂದ ಆಸ್ಪತ್ರೆಗೆ ತೆರಳಲು ಮುಂದಾದೆ. ಕಾರಿನಿಂದ ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡಿ ಉಳಿದ ಪ್ರಯಾಣವನ್ನು ಕವರ್ ಮಾಡಲು ನಿರ್ಧರಿಸಿದೆ. ನಾನು ನಿಯಮಿತವಾಗಿ ಜಿಮ್ ಮಾಡುವುದರಿಂದ ನನಗೆ ಓಡುವುದು ಸುಲಭವಾಯಿತು. ಆಸ್ಪತ್ರೆಗೆ 3 ಕಿ.ಮೀ ಓಡಿಕೊಂಡು ಬಂದು ಶಸ್ತ್ರಚಿಕಿತ್ಸೆಯ ಸಮಯಕ್ಕೆ ತಲುಪಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಐದಾರು ಅಸ್ತ್ರ