ಬೆಂಗಳೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇರುವ ಕಡೆಯ ಕ್ಷಣಗಳಲ್ಲಿ ಪದ್ಮನಾಭ ನಗರದಿಂದ ಸಂಸದ ಡಿ.ಕೆ.ಸುರೇಶ್ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ಕೆಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಡಿ.ಕೆ.ಸುರೇಶ್ ಸ್ಪರ್ಧೆ ಇದೀಗ ಪದ್ಮನಾಭ ನಗರದಿಂದ ಇಲ್ಲ ಎಂದು ಸ್ಪಷ್ಟವಾಗಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಘುನಾಥ್ ನಾಯ್ಡು ನಿನ್ನೆ ಬಿ ಫಾರ್ಮ್ ಸಮೇತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಪದ್ಮನಾಭ ನಗರದಿಂದ ಮತ್ತೋರ್ವ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದು ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನದ ಮೇಲೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಧ್ಯಾಹ್ನದವರೆಗೆ ಕಾಯ್ದು ನೋಡಿ ಎಂದೂ ಸಹ ತಿಳಿಸಿದ್ದರು.
ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ.ಸೋದರ ಬೆಂಬಲಿಗರು ಪದ್ಮನಾಭ ನಗರ ನಾಮಪತ್ರ ಸಲ್ಲಿಕೆ ಕೇಂದ್ರದ ಬಳಿ ಆಗಮಿಸಿ ಕಾಯುತ್ತಿರುವುದು ಕಂಡುಬಂದಿತ್ತು. ಆದರೆ, ನಾಮಪತ್ರ ಸಲ್ಲಿಕೆ ಕಾಲಾವಧಿ ಮುಕ್ತಾಯವಾಗುವ ವರೆಗೂ ಡಿ.ಕೆ.ಸುರೇಶ್ ಬೆಂಗಳೂರನ್ನು ಸಹ ತಲುಪಲಿಲ್ಲ. ಆಸ್ತಿ ಘೋಷಣೆ ಅಫಿಡವಿಟ್ನಲ್ಲಿ ಟೆಕ್ನಿಕಲ್ ಸಮಸ್ಯೆ ಆಗಬಹುದು ಎಂಬ ಆತಂಕ ಡಿ.ಕೆ.ಶಿವಕುಮಾರ್ಗೆ ಕಾಡಿದ್ದು ಕನಕಪುರದಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ರಘುನಾಥ್ ನಾಯ್ಡುಗೆ ಕೈ ಟಿಕೆಟ್ ಪಕ್ಕಾ: ಈ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ಇಂದು ಕನಕಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಧ್ಯಾಹ್ನದ ನಂತರವೂ ಕನಕಪುರದಲ್ಲಿಯೇ ಇದ್ದು ಪದ್ಮನಾಭ ನಗರಕ್ಕೆ ಬರಲು ಸಾಧ್ಯವಾಗಿಲ್ಲ. ಬಿ ಫಾರಂ ಸಮೇತ ನಾಮಪತ್ರ ಸಲ್ಲಿಕೆ ಮಾಡಿರುವ ರಘುನಾಥ್ ನಾಯ್ಡು ಅವರೇ ಅಧಿಕೃತ ಅಭ್ಯರ್ಥಿಯಾಗಿ ಮುಂದುವರಿಯಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿಯಿಂದ ಕನಕಪುರದಲ್ಲಿ ಮಾಜಿ ಸಚಿವ ಆರ್.ಅಶೋಕ್ ಕಣಕ್ಕಿಳಿದಿದ್ದಾರೆ. ಇದರ ಜೊತೆ ಪದ್ಮನಾಭ ನಗರದಿಂದಲೂ ಸಹ ಸ್ಪರ್ಧಿಸಿರುವ ಆರ್.ಅಶೋಕ್ ವಿರುದ್ಧ ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಘುನಾಥ್ ನಾಯ್ಡು ಘೋಷಿತರಾಗಿದ್ದರು ಸಹ ನಿನ್ನೆಯವರೆಗೂ ಅವರಿಗೆ ಬಿ ಫಾರಂ ನೀಡಿಕೆ ಆಗಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರ ಸ್ಪರ್ಧೆಯ ಸಮಸ್ಯೆ ಎದುರಾಗಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆ ಡಿಕೆ ಸೋದರರು ಕನಕಪುರದತ್ತ ಹೆಚ್ಚಿನ ಗಮನ ಹರಿಸಿದರು. ಇದರಿಂದಾಗಿ ಪ್ರಭು ರಾಮನಗರದಿಂದ ಏಕಾಂಗಿಯಾಗಿ ನಿನ್ನೆ ರಘುನಾಥ್ ನಾಯ್ಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿ ಫಾರಂ ಸಹಿತ ನಾಮಪತ್ರ ಸಲ್ಲಿಸಿರುವ ಅವರೇ ಇದೀಗ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಯವರೆಗೂ ಡಿ.ಕೆ.ಸುರೇಶ್ ಅವರ ಆಗಮನದ ನಿರೀಕ್ಷೆಯಲ್ಲಿ ಇದ್ದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ನಿರಾಸೆ ಉಂಟಾಗಿದೆ. ನಿಗದಿಯಂತೆ ಮಧ್ಯಾಹ್ನ 3 ಗಂಟೆಗೆ ಪದ್ಮನಾಭನಗರ ಚುನಾವಣಾ ಅಧಿಕಾರಿಗಳು ನಾಮಪತ್ರ ಸ್ವೀಕಾರವನ್ನು ನಿಲ್ಲಿಸಿದ್ದು ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಬೀಗ ಹಾಕಿದ್ದಾರೆ. ಪೊಲೀಸರು ಕಚೇರಿಗೆ ಅಡ್ಡಲಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ.
ಇದನ್ನೂ ಓದಿ: ಜ್ಯೋತಿಷಿಗಳ ಸಲಹೆಯಂತೆ ಕನಕಪುರದಿಂದ ಡಿ.ಕೆ.ಸುರೇಶ್ ಸ್ಪರ್ಧೆ: ಆರ್.ಅಶೋಕ್ ವ್ಯಂಗ್ಯ