ಬೆಂಗಳೂರು: ರಾಜ್ಯ ಸರ್ಕಾರದ ರಾಜಕೀಯ ಏನೇ ಇರಲಿ ನನ್ನ ಪದಗ್ರಹಣ ಸಮಾರಂಭ 'ಪ್ರತಿಜ್ಞಾ' ನಿಗದಿಯಂತೆ ಬೇರೊಂದು ದಿನ ನಡೆಸುತ್ತೇವೆ. ಕಾರ್ಯಕರ್ತರು ಸಿದ್ಧತೆ ನಿಲ್ಲಿಸುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಸಿಎಂ ಬಿಎಸ್ವೈ, ಡಿಜಿ - ಐಜಿಪಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಮಾರಂಭ ನಡೆಸಲು ಅವಕಾಶ ಕೇಳಿದ್ದೇನೆ. ಕಾರ್ಯಕರ್ತರು ಸಿದ್ಧತೆ ನಿಲ್ಲಿಸುವುದು ಬೇಡ, ದಿನಾಂಕ ಘೋಷಣೆ ಮಾಡುತ್ತೇನೆ. ಸರ್ಕಾರ ಅವಕಾಶ ನೀಡುತ್ತಿದ್ದಂತೆ ನಮ್ಮವರಿಗೆ ತಕ್ಷಣ ತಿಳಿಸುತ್ತೇನೆ. ಯೋಜಿಸಿದಂತೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸದ್ಯ ರಾಜ್ಯ ಸರ್ಕಾರ ಜೂ. 8 ರವರೆಗೆ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸದಂತೆ ಸೂಚಿಸಿದೆ. ಇಲ್ಲಿ ಸರ್ಕಾರದ ರಾಜಕೀಯ ಷಡ್ಯಂತ್ರ ನೇರವಾಗಿ ಕಾಣಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ತಲೆಬಾಗುತ್ತೇವೆ. ಮುಂದೆ ಕಾರ್ಯಕ್ರಮ ನಡೆಸುತ್ತೇವೆ. ಜೂ.7 ಕ್ಕೆ ಕಾರ್ಯಕ್ರಮ ನಡೆಯಲ್ಲ, ಮುಂದೆ ದಿನ ನಿಗದಿಪಡಿಸುತ್ತೇವೆ. ಸದ್ಯ ಸರ್ಕಾರ ಅನುಮತಿ ನೀಡುವವರೆಗೂ ಅಧಿಕಾರ ಹಸ್ತಾಂತರ ಸಮಾರಂಭ ನಡೆಯಲ್ಲ ಎಂದು ಸ್ಪಷ್ಟಪಡಿಸಿದ್ರು.