ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಕಾಂಗ್ರೆಸ್ ಭವನದಲ್ಲಿ 72 ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಸರ್ಕಾರ ನಿಂತಿದೆ. ಇದರ ಬಗ್ಗೆ ನಾವು ಧ್ವನಿ ಎತ್ತಬೇಕು. ಸಾಮಾನ್ಯ ಜನರ ಮೇಲೆ ತೆರಿಗೆ ಹೆಚ್ಚಳ ಆಗುತ್ತಿದೆ. ಕೊರೊನಾ ಸಮಯದಲ್ಲಿ ಆದ ತೊಂದರೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಇದರ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಿದ್ರೆ ನಮ್ಮ ಬಾಯಿ ಮುಚ್ಚಿಸುವ ಕೆಲಸ ಸರ್ಕಾರ ಮಾಡಿತ್ತು. ಬಣ್ಣದ ಮಾತುಗಳಿಗೆ ನಾವು ಮರಳಾಗಬಾರದು ಎಂದರು.
ಏಳು ದಶಕಗಳ ಸಂಭ್ರಮದಲ್ಲಿ ನಾವಿದ್ದೇವೆ. ಸಂವಿಧಾನದ ಮೇಲೆ ನಾವು ನಂಬಿಕೆ ಇಟ್ಟು ಬದುಕುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ಹಲವಾರು ಜಾತಿ, ಧರ್ಮದ ಜನ ಶ್ರಮಿಸಿದ್ದಾರೆ. 72 ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಚಂದ್ರಯಾನ ಸೇರಿದಂತೆ, ದೇಶದ ಒಳಗೆ, ಗಡಿಯಲ್ಲಿ ದೇಶ ಹಲವಾರು ಸಾಧನೆ ಮಾಡಿದೆ. 70 ವರ್ಷದ ನಾವು ಮಾಡಿರುವ ಸಾಧನೆಯನ್ನ ಪ್ರಪಂಚ ನೋಡಿದೆ. ಪ್ರತಿದಿನ ಸ್ವಾತಂತ್ರ್ಯದ ಬಗ್ಗೆ ಮಾತಾಡಬೇಕು. ಪ್ರತಿದಿನ ಮಕ್ಕಳಿಗೆ ದೇಶಾಭಿಮಾನದ ಬಗ್ಗೆ ಅರಿವು ಮೂಡಿಸಬೇಕು. ಧಾರ್ಮಿಕ ಹಬ್ಬಗಳನ್ನು ಮಾಡುವ ಹಾಗೆ ದೇಶದ ಪವಿತ್ರ ಹಬ್ಬವನ್ನು ಮಾಡಬೇಕು ಎಂದು ಡಿಕೆಶಿ ಕರೆ ನೀಡಿದ್ರು.
ಇಡೀ ರಾಷ್ಟ್ರ ಕವಲು ದಾರಿಯಲ್ಲಿ ಹೊರಟಿದೆ. ರಾಷ್ಟ್ರದ ಉದ್ದಗಲಕ್ಕೂ ಹೋರಾಟ ಆರಂಭವಾಗಿದೆ. ವೈಯಕ್ತಿಕ ಗುರುತಿಗೂ ಹೋರಾಟ ನಡೆದಿದೆ. ಇವತ್ತು ರೈತರು ಭವಿಷ್ಯವನ್ನು ರೂಪಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾನೆ. ಇಡೀ ಭಾರತ ಅನ್ನದಾತನ ಜೊತೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಸಂಸತ್ತಿನಲ್ಲಿ ಕಾಯ್ದೆಗಳನ್ನು ಯಾವುದೇ ಚರ್ಚೆಗೆ ಒಳಪಡಿಸದೆ ಸರ್ವಾಧಿಕಾರಿ ಧೋರಣೆ ಮಾಡುತ್ತಿವೆ. ದೇಶದಲ್ಲಿ ಟ್ರ್ಯಾಕ್ಟರ್ಗಳು ರಸ್ತೆಗೆ ಇಳಿದಿವೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಹೊರಗಡೆ ಬರ್ತಿವೆ. ಕೋಮುವಾದಿ ಪಕ್ಷ ರೈತ ವಿರೋಧಿ ಕಾನೂನನ್ನು ತಂದಿದೆ. ನಿತ್ಯ ಬದುಕಿನಲ್ಲಿ ಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತಿವೆ. ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದ್ರು.
ಸ್ವಾತಂತ್ರ್ಯ ಭಾರತದ ಪರಿಸ್ಥಿತಿ ಹೇಗಿತ್ತೋ ಅದೇ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬಿಜೆಪಿ ವಿರುದ್ಧ ನಾವು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಅಭಿವೃದ್ಧಿಶೀಲ ರಾಷ್ಟ್ರವಾಗಿ ನಾವು ನಮ್ಮ ರಾಷ್ಟ್ರವನ್ನು ಪರಿವರ್ತನೆ ಮಾಡಬೇಕು. ಸಂವಿಧಾನವನ್ನು ಬದಲಾವಣೆ ಮಾಡಲು ಬಿಡದೆ ಸದಾ ಹೋರಾಟ ಮಾಡಬೇಕು ಎಂದು ಹೇಳಿದರು. ಭಾರತ ಶಾಂತಿ ರಾಷ್ಟ್ರ , ಎಲ್ಲಾ ಧರ್ಮ, ಜಾತಿಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಅದೇ ಕಾಂಗ್ರೆಸ್ ಧ್ಯೇಯ ಎಂದು ವಿವರಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕೊರೊನಾ ಅಲೆಯನ್ನು ನಿಯಂತ್ರಿಸುವಲ್ಲಿ ಕರ್ನಾಟಕ ಯಶಸ್ವಿ: ರಾಜ್ಯಪಾಲರ ಶ್ಲಾಘನೆ