ಬೆಂಗಳೂರು: ನಾನು ಯಾರಿಗೂ ಕ್ಷಮೆ ಕೇಳಲ್ಲ. ನಾನು ಕ್ಷಮೆ ಕೇಳುವ ಅವಶ್ಯಕತೆಯೂ ಇಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬ್ಲಾಸ್ಟ್ ಪ್ರಕರಣ ಬಳಕೆ: ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಾಧ್ಯಮಗಳ ದಿಕ್ಕು ತಪ್ಪಿಸಲು ಕುಕ್ಕರ್ ಬ್ಲಾಸ್ಟ್ ಘಟನೆಯನ್ನು ಬಳಸಿಕೊಂಡರು. ಭ್ರಷ್ಟಾಚಾರದ ವಿಚಾರದಲ್ಲಿ ಮಾಧ್ಯಮಗಳು ತುಂಬಾ ಚೆನ್ನಾಗಿ ತೋರಿಸುತ್ತಿದ್ದವು. ಅದರ ಗಮನವನ್ನ ಬೇರೆಡೆ ಸೆಳೆಯಲು ಬ್ಲಾಸ್ಟ್ ಪ್ರಕರಣ ಬಳಕೆ ಮಾಡಿಕೊಂಡರು. ಟೆರರಿಸ್ಟ್ ಅಟ್ಯಾಕ್ ಅನ್ನು ನಾವು ಸಮರ್ಥನೆ ಮಾಡುತ್ತಿಲ್ಲ. ಭಯೋತ್ಪಾದಕರ ದಾಳಿಯಿಂದ ನಮ್ಮ ನಾಯಕರನ್ನೇ ನಾವು ಕಳೆದುಕೊಂಡಿದ್ದೇವೆ. ಅದರ ನೋವು ಏನು ಅನ್ನೋದು ನಮಗೆ ಗೊತ್ತಿದೆ ಎಂದು ತಿಳಿಸಿದರು.
ಕುಕ್ಕರ್ ಬ್ಲಾಸ್ಟ್ ಮಾಡಿದವರಿಗೆ ಶಿಕ್ಷೆಆಗಲಿ: ತನಿಖೆಗೂ ಮೊದಲೇ ಅದು ಟೆರರ್ ಅಟ್ಯಾಕ್ ಅಂತಾ ಹೇಗೆ ಗೊತ್ತಾಯ್ತು?. ಡೈವರ್ಷನ್ ಟ್ಯಾಕ್ಟಿಕ್ಸ್ ಬಳಸಿದ್ದೀರಿ. ರಾಜಕೀಯವಾಗಿ ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕುಕ್ಕರ್ ಬ್ಲಾಸ್ಟ್ ಯಾರೇ ಮಾಡಿರಲಿ, ಟೆರರಿಸ್ಟ್ ಮಾಡಿರಲಿ. ಯಾರೇ ಮಾಡಿದ್ರು ತಪ್ಪು, ಅದನ್ನ ಖಂಡಿಸಬೇಕು. ಅವರಿಗೆ ಶಿಕ್ಷೆ ಆಗಬೇಕು, ಇದು ಕಾಂಗ್ರೆಸ್ ಪಕ್ಷದ ಬದ್ಧ ನಿಲುವು. ಈ ದೇಶದ ಐಕ್ಯತೆ ಸಮಗ್ರತೆ ಶಾಂತಿ ವಿಚಾರದಲ್ಲಿ ನಾವು ರಾಜಿ ಆಗೋದಕ್ಕೆ ತಯಾರಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಭಯೋತ್ಪಾದನೆ ಸಂಕಷ್ಟ ಏನು ಅಂತ ನಮಗೆ ಗೊತ್ತು: ಟೆರರಿಸ್ಟ್ ಆಕ್ಟಿವಿಟಿಯಿಂದ ನಮ್ಮ ನಾಯಕರನ್ನು ಕಳೆದುಕೊಂಡಿದ್ದೇವೆ. ನಮ್ಮ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ಅಧಿಕಾರ ತ್ಯಾಗ ಮಾಡಿದ್ದಾರೆ. ಮಹಾರಾಷ್ಟ್ರ ಘಟನೆಯಲ್ಲಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರು ರಾಜೀನಾಮೆ ಕೊಡಬೇಕಾಯಿತು. ಅಂತಹ ಇತಿಹಾಸ ನಮ್ಮ ಕಾಂಗ್ರೆಸ್ ಪಕ್ಷಕ್ಕಿದೆ. ಈಗ ಚಿಲುಮೆ ಪ್ರಕರಣದಲ್ಲಿ ಮಂತ್ರಿಗಳು, ಶಾಸಕರು ಸೇರಿಕೊಂಡು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.
ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ
ಒಂದು ದೊಡ್ಡ ತಂಡ ಸೇರಿ 8,600 ಜನ BLO ಗಳನ್ನ ನೇಮಕ ಮಾಡಿ ವೋಟರ್ ಮಾಹಿತಿಯನ್ನು ಕದಿಯುತ್ತಿದ್ದರು. ಇದನ್ನು ಮಾಧ್ಯಮಗಳಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಇದನ್ನ ನಾವು ಬಯಲಿಗೆ ಎಳೆದಿದ್ವಿ. ಈಗ ಕುಕ್ಕರ್ ಬ್ಲಾಸ್ಟ್ ವಿಚಾರವನ್ನ NIA ಅಂತ ಈಗ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅವರೇ ಇದು ಟೆರರಿಸ್ಟ್ ಆಕ್ಟಿವಿಟಿ ಎಂದರು: ಮೊದಲ ದಿನವೇ NIA ಕೊಡುತ್ತೇವೆ ಎಂದು ಹೇಳಲಿಲ್ಲ. ಅವರೇ ಇದನ್ನು ಟೆರರಿಸ್ಟ್ ಆಕ್ಟಿವಿಟಿ ಅಂತ ಸರ್ಟಿಫಿಕೇಟ್ ಹೇಗೆ ಕೊಟ್ಟರು. ನಾವು ಯಾರನ್ನು ಸಪೋರ್ಟ್ ಮಾಡುತ್ತಿಲ್ಲ. ನಿಮ್ಮ ಭ್ರಷ್ಟಾಚಾರ, ಕಳ್ಳತನವನ್ನು ಮುಚ್ಚಿ ಹಾಕಲು ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ ಅಂತ ಹೇಳುತ್ತಿದ್ದೇವೆ.
ಘಟನೆ ಆಗಿದೆ, ತನಿಖೆ ನಡೆದು ಶಿಕ್ಷೆ ಆಗಬೇಕು. ಒಂದು ಸಣ್ಣ ತನಿಖೆ ಇಲ್ಲದೆ ನೀವು ಹೇಳಿದ್ದು ಇದು ಟೆರರ್ ಆಕ್ಟ್ ಅಂತ. ಪೂರ್ಣ ಪ್ರಮಾಣದ ತನಿಖೆ ನಡೆಸದೆ ಟೆರರ್ ಆಕ್ಟ್ ಅಂತ ಹೇಗೆ ಹೇಳಿದ್ರಿ?. ಮಂಗಳೂರು, ದಕ್ಷಿಣ ಕನ್ನಡದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.