ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ಐಶ್ವರ್ಯ ವಿವಾಹ ಉದ್ಯಮಿ ಅಮಾರ್ಥ್ಯ ಹೆಗ್ಡೆ ಜೊತೆ ನಡೆಯಲಿದೆ.
ವಿವಾಹ ಸಮಾರಂಭದ ಮೂಲಕ ಡಿ ಕೆ ಶಿವಕುಮಾರ್, ಎಸ್ ಎಂ ಕೃಷ್ಣ ಕುಟುಂಬ ಸಂಬಂಧಿಯಾಗಲಿದ್ದು, ಬಹುಕಾಲದ ಸ್ನೇಹಿತರಾಗಿದ್ದ ಡಿ ಕೆ ಶಿವಕುಮಾರ್ ಹಾಗೂ ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಕುಟುಂಬದ ಬಹುದಿನದ ಕನಸು ನನಸಾಗಲಿದೆ.
ಫೆ.5ರಂದು ನಡೆದಿದ್ದ ಸಂಗೀತ್ನಲ್ಲಿ ಕುಟುಂಬ ಸದಸ್ಯರೆಲ್ಲಾ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಫೆ.12ರಂದು ಮೆಹಂದಿ ಕಾರ್ಯಕ್ರಮ ಜರುಗಿದೆ. ನಿನ್ನೆ ನಿವಾಸದಲ್ಲೇ ಜೋಡಿಗೆ ಎಣ್ಣೆ ಶಾಸ್ತ್ರ ನಡೆಯಿತು. ಫೆ.14ರಂದು ಹೋಟೆಲ್ ಶೆರಟಾನ್ನಲ್ಲಿ ಮುಹೂರ್ತ, ಫೆ.17ರಂದು ಪ್ರೆಸ್ಟೀಜ್ ಗಾಲ್ಫ್ ಶೈರ್ನಲ್ಲಿ ಆರತಕ್ಷತೆ, ಫೆ.20ರಂದು ಅರಮನೆ ಮೈದಾನದಲ್ಲಿ ಬೀಗರ ಔತಣ ನಡೆಯಲಿದೆ. ಎರಡು ಕುಟುಂಬಗಳಿಂದ ವಿವಾಹದ ಎಲ್ಲ ಸಿದ್ಧತೆ ಪೂರ್ಣವಾಗಿದ್ದು, ಸಂಭ್ರಮ ಮನೆಮಾಡಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ನಾಟಕ, ಥಳುಕಿಲ್ಲದ ರಾಜಕಾರಣಿ: ಮಾಜಿ ಸಚಿವ ಚೆಲುವರಾಯಸ್ವಾಮಿ
ಆತ್ಮೀಯ ಸ್ನೇಹಿತರಾಗಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧಾರ್ಥ ಹೆಗ್ಡೆ ತಮ್ಮ ಸ್ನೇಹವನ್ನು ಸಂಬಂಧವಾಗಿಸುವ ಮಾತುಕತೆಯನ್ನು ನಡೆಸಿದ್ದರು. ಆದರೆ ಈ ಮಧ್ಯೆ ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆಗೆ ಶರಣಾದರು. ಈ ಹಿನ್ನೆಲೆ ಕೆಲ ಸಮಯ ವಿವಾಹ ಮಾತುಕತೆ ಮುಂದೂಡಲಾಗಿತ್ತು. ತಮ್ಮ ರಾಜಕೀಯ ಗುರುವಾಗಿರುವ ಎಸ್ ಎಂ ಕೃಷ್ಣ ಅವರ ಮೊಮ್ಮಗನ ಜತೆ ತಮ್ಮ ಪುತ್ರಿಯ ವಿವಾಹದ ಮಾತುಕತೆ ಮತ್ತೆ ನಡೆಸಿದ ಡಿಕೆಶಿ ಇತ್ತೀಚೆಗಷ್ಟೇ ನಿಶ್ಚಿತಾರ್ಥವನ್ನು ಕೂಡ ಅದ್ಧೂರಿಯಾಗಿ ನೆರವೇರಿಸಿದ್ದರು. ಇದೀಗ ವಿವಾಹ ಸಂಭ್ರಮ ಕಳೆಗಟ್ಟಿದೆ.
ಇಂದು ಆಯ್ದ ಕೆಲ ಸಂಬಂಧಿಗಳು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಲಿದೆ.