ಬೆಂಗಳೂರು : ಹಬ್ಬಗಳ ಸೀಸನ್ ಆರಂಭವಾದರೆ ಹೆಂಗಳೆಯರಿಗೆ ಮೊದಲು ನೆನಪಾಗೋದೆ ಸೀರೆಗಳ ಶಾಪಿಂಗ್. ಯಾವ ಸೀರೆ ಅಂಗಡಿ ನೋಡಿದರೂ, ಮಹಿಳೆಯರದ್ದೇ ಕಾರುಬಾರು. ಇನ್ನೂ ಹೆಂಗಳೆಯರ ಸೀರೆ ಆಸೆಯನ್ನು ಪೂರೈಸಲು ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ದಿವಾ ಯುಗಾದಿ ಶಾಪಿಂಗ್ ಮೇಳವನ್ನ ಆಯೋಜಿಸಲಾಗಿದೆ.
ಬಜ್ಜೋನಿಫೈ ಸಂಸ್ಥೆಯು ಬೆಂಗಳೂರು ಎಕ್ಸ್ ಫೊ ದ ಸಹಯೋಗದೊಂದಿಗೆ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಏಪ್ರಿಲ್ 5ರಿಂದ 14ರವರೆಗೆ ಯುಗಾದಿ ಖರೀದಿ ಮೇಳ ‘ದಿವಾ’ ಅನ್ನು ಆಯೋಜಿಸಿದೆ. 10 ದಿನಗಳ ಈ ವ್ಯಾಪಾರ ಮೇಳವು ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ಸಂಜೆ 7 ಗಂಟೆಯ ತನಕ ತೆರೆದಿರಲಿದೆ.
ಯುಗಾದಿ ಖರೀದಿ ಮೇಳದಲ್ಲಿ ನಾನಾ ರಾಜ್ಯಗಳ ಕರಕುಶಲ ಕರ್ಮಿಗಳು ತಯಾರಿಸಿರುವ ಕರಕುಶಲ ಹಾಗೂ ಕೈಮಗ್ಗದ ನಾನಾ ಬಗೆಯ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ನಟ ವಿನಯ್ ರಾಜ್‍ಕುಮಾರ್ ಮತ್ತು ನಟಿ ವೈಭವಿ ಜಗದೀಶ್ ಮೇಳಕ್ಕೆ ಚಾಲನೆ ನೀಡಿದರು. ಸುಂದರವಾದ ರೇಷ್ಮೆ ಸೀರೆಗಳು, ಡಿಸೈನರ್ ಕುರ್ತಾಗಳು, ಗೃಹಾಲಂಕಾರಿಕ ವಸ್ತುಗಳು ಹಾಗೂ ಮೋಜಿನ ಆಭರಣಗಳು ಯುಗಾದಿ ಶಾಪಿಂಗ್ ಮೇಳ ‘ದಿವಾ’ದಲ್ಲಿ ಲಭ್ಯವಿದ್ದು, ಹಬ್ಬದ ಋತುವಿನ ಖರೀದಿಗೆ ಅತ್ಯುತ್ತಮ ತಾಣವಾಗಿದೆ.
ಯುಗಾದಿ ಹಬ್ಬಕ್ಕೆಂದೇ ಹೇಳಿ ಮಾಡಿಸಿರುವಂತಹ ನಾನಾ ಬಣ್ಣಗಳ ರೇಷ್ಮೆ ಹಾಗೂ ಅಲಂಕಾರಿ ಸೀರೆಗಳು ಮೇಳದಲ್ಲಿ ಲಭ್ಯವಿದೆ. ದೇಶಾದ್ಯಂತದ ನಾನಾ ವಿನ್ಯಾಸದ ಕುರ್ತಾಗಳನ್ನು ಕೂಡ ಇಲ್ಲಿ ಆಯ್ಕೆ ಮಾಡಬಹುದು. ಅದೇ ರೀತಿ ಮೇಳದಲ್ಲಿ ಸಾಂಪ್ರದಾಯಿಕ ಉಡುಗೆ ಫುಲ್ಕಾರಿಯಿಂದ ಹಿಡಿದು ಬಾಂದನಿಗಳನ್ನು ಖರೀದಿ ಮಾಡಬಹುದು. ಜತೆಗೆ ಸಾಂಪ್ರದಾಯಿಕ ಬಟ್ಟೆಗಳಿಗೆ ಹೊಂದಿಕೆಯಾಗುವ ಸಮಕಾಲೀನ ಆಕ್ಸೆಸರಿಗಳು ಹಾಗೂ ಆಭರಣಗಳನ್ನು ಕೂಡ ಕೊಳ್ಳಬಹುದು. ಮೇಳದಲ್ಲಿ ಸುಮಾರು 90 ಕ್ಕಿಂತ ಹೆಚ್ಚು ಮಳಿಗೆಗಳು ಇದ್ದು, ಒಂದೇ ಸೂರಿನಲ್ಲಿ ಹಬ್ಬಕ್ಕೆ ಬೇಕಾದ ನಾನಾ ವಸ್ತುಗಳನ್ನು ಖರೀದಿಸಬಹುದು.