ಬೆಂಗಳೂರು: ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಇಂದು ಬೆಳಗ್ಗೆ ನವದೆಹಲಿಗೆ ತೆರಳಿರುವ ಯಡಿಯೂರಪ್ಪ ಕರ್ನಾಟಕದ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಸಮಯ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರ ಸಮಯವನ್ನೂ ಕೇಳಿದ್ದು ಇಂದೇ ಅವರ ಭೇಟಿಯನ್ನೂ ಮಾಡಲಿದ್ದೇನೆ ಎಂದರು.
ಮೂವರು ನಾಯಕರ ಭೇಟಿ ವೇಳೆ ಸಹಜವಾಗಿ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದೆ. ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಹಾಗಾಗಿ ಹೈಕಮಾಂಡ್ ನಾಯಕರ ಜೊತೆ ಮಾತನಾಡಲು ಬಂದಿದ್ದೇವೆ. ಅವರು ನೀಡುವ ಸಲಹೆ ಸೂಚನೆಯಂತೆ ನನ್ನ ಜವಾಬ್ದಾರಿ ನಿರ್ವಹಣೆ ಮಾಡಲಿದ್ದೇನೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸಲ್ಲ. ಆ ವಿಷಯದ ಪ್ರಸ್ತಾಪ ಇರಿಸಿಕೊಂಡು ಬಂದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ ಅತ್ಯುನ್ನತ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಯಡಿಯೂರಪ್ಪ ದೆಹಲಿ ಪ್ರವಾಸ.. ಸಚಿವ ಆಕಾಂಕ್ಷಿಗಳಲ್ಲಿ ಕುತೂಹಲ