ಬೆಂಗಳೂರು: ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಇಂದು ಸಭೆ ನಡೆಯಿತು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಮಾಧುಸ್ವಾಮಿ, ನಾರಾಯಣಸ್ವಾಮಿ, ಗೌರಿಶಂಕರ್, ಡಾ. ರಂಗನಾಥ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸುವ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳು ಸೇರಿದಂತೆ ಎತ್ತಿನಹೊಳೆ ಯೋಜನೆಯ ಭೂ ಸಂತ್ರಸ್ಥರಿಗೆ ನಿಗದಿಪಡಿಸಿದ ಪರಿಹಾರದಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಸರಿಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.
ತುಮಕೂರು ಜಿಲ್ಲೆಯ ಎಲ್ಲ ಶಾಸಕರು ನೀರಾವರಿ ಯೋಜನೆಗಳ ಕುರಿತ ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದೆಲ್ಲವನ್ನೂ ಡಿಸಿಎಂ ಪರಮೇಶ್ವರ್ ಆಲಿಸಿದರು.
ಹೇಮಾವತಿ ಯೋಜನೆ ಕುರಿತು ಚರ್ಚೆ ಬೇಡ. ಈಗಾಗಲೇ ಕೆಲಸ ನಡೆಯುತ್ತಿದೆ. ಉಳಿದ ಯೋಜನೆಗಳನ್ನು ಚರ್ಚೆ ಮಾಡೋಣವೆಂದು ಡಿಸಿಎಂ ಸಲಹೆ ನೀಡಿದರು.
ಚರ್ಚೆ ಸಂದರ್ಭದಲ್ಲಿ ಶಾಸಕರು ನೀಡಿದ ಕೆಲ ಸಲಹೆಗಳನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಹೀಗಾಗಿ, ಡಿಸಿಎಂ ಹಾಗೂ ಶಾಸಕರಿಗೂ ಮಾತಿನ ವಾಗ್ವಾದವೂ ನಡೆದಿದೆ ಎನ್ನಲಾಗಿದೆ.