ಬೆಳಗಾವಿ/ಬೆಂಗಳೂರು: ಕಬ್ಬಿನ ಕಟಾವು ಮತ್ತು ಸಾಗಾಣಿಕೆ ದರದ ಕುರಿತು ಎರಡು ತಿಂಗಳಿನಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ತೂಕದಲ್ಲಿ ಮೋಸ ಮಾಡುವ ಯಾವುದೇ ಕಾರ್ಖಾನೆ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಎಷ್ಟೇ ದೊಡ್ಡವರು ಇದರ ಹಿಂದೆ ಇದ್ದರೂ ಕ್ರಮ ಖಚಿತ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.
ರೂಲಿಂಗ್ ನೀಡಿದ ಸಭಾಪತಿ: ಆದರೆ ಈ ಭರವಸೆ ವೇಳೆ ಚರ್ಚೆ ವಿಸ್ತೃತ ರೂಪ ಪಡೆದು ಸದನದಲ್ಲಿ ಧರಣಿ, ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪ್ರಶ್ನೋತ್ತರದ ವೇಳೆ ಚರ್ಚೆಗೆ ಅವಕಾಶ ನೀಡಬಾರದು ಎನ್ನುವ ಸಿಎಂ ಸಲಹೆ ಪರಿಗಣಿಸಿ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ರೂಲಿಂಗ್ ನೀಡಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಕಾಶ್ ರಾಥೋಡ್ ಮತ್ತು ಪಿ.ಆರ್ ರಮೇಶ್ ಜಂಟಿಯಾಗಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಬೇರೆ ರಾಜ್ಯದಲ್ಲಿ ಎಸ್ಇಪಿ ಕಾನೂನು ಇದೆ. ನಮ್ಮಲ್ಲಿ ಇನ್ನು ಜಾರಿಗೆ ತಂದಿಲ್ಲ.
ಎಫ್.ಆರ್.ಪಿ ಆಧಾರದ ಮೇಲೆ ಅನೇಕ ಕಾರ್ಖಾನೆಗಳು ಹೆಚ್ಚಿನ ಹಣ ಕೊಡುವ ಕೆಲಸ ಮಾಡುತ್ತಿವೆ. 92 ಕಾರ್ಖಾನೆಗಳಲ್ಲಿ 73 ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸ ಆರಂಭಿಸಿವೆ. ಕಳೆದ ವರ್ಷಕ್ಕಿಂತಹ ಹೆಚ್ಚಿನ ಕಬ್ಬು ಅರೆಯುವ ನಿರೀಕ್ಷೆ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಬಿಟ್ಟರೆ ಮೂರನೇ ರಾಜ್ಯ ಕರ್ನಾಟಕವಾಗಿದೆ. ಸಕ್ಕರೆ ಕಾರ್ಖಾನೆಗಳು ಲಾಭದಾಯಕವಾಗುತ್ತಿವೆ. ರೈತನಿಗೆ ಪಾಲುದಾರಿಗೆ ಹೋಗಬೇಕು ಎಂದು ಮೊದಲ ಬಾರಿ ಕಬ್ಬಿನ ಉಪ ಉತ್ಪನ್ನದಲ್ಲಿ 50 ರೂ. ರೈತರಿಗೆ ಶೇರು ನೀಡುವ ಆದೇಶ ಮಾಡಿದ್ದೇವೆ. 202 ಕೋಟಿ ಮೊದಲ ಕಂತಿನಲ್ಲಿ ರೈತರಿಗೆ ಬಿಡುಗಡೆ ಮಾಡಲಿದ್ದೇವೆ.
ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ: ಎಫ್.ಆರ್.ಪಿ ಗಿಂತ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ ಎಂದು ದಕ್ಷಿಣ ಭಾರತ ಕಾರ್ಖಾನೆಗಳು ಕೋರ್ಟ್ ಮೆಟ್ಟಿಲೇರಿವೆ. ಆದರೆ ನಮ್ಮ ರಾಜ್ಯದ ಎಲ್ಲ ಭಾಗದಲ್ಲಿಯೂ ಎಫ್.ಆರ್.ಪಿ ಮೇಲೆ 150-200 ರೂ. ಹೆಚ್ಚು ಕೊಡುವ ಕೆಲಸ ಮಾಡುತ್ತಿವೆ. ಸರ್ಕಾರದ ಮನವಿಗೆ ಅನೇಕ ಸಕ್ಕರೆ ಕಾರ್ಖಾನೆ ಮಾಲೀಕರು ಸ್ಪಂದಿಸಿ ಹೆಚ್ಚು ಹಣ ನೀಡುತ್ತಿದ್ದಾರೆ. ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ರೈತರಿಗೆ ನಷ್ಟವಾಗುತ್ತಿದೆ.ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಬರುತ್ತಿದೆ. ಪಕ್ಷಾತೀತವಾಗಿ ರೈತರ ಹಿತ ಕಾಪಾಡಲು ಎಲ್ಲ ಸಕ್ಕರೆ ಕಾರ್ಖಾನೆ ವಿರುದ್ಧ ದಾಳಿ ನಡೆಸಿ ಎಲ್ಲ ಅಂಕಿ ಅಂಶ ಪಡೆದಿದ್ದೇವೆ. ಯಾರು ರೈತರಿಗೆ ತೂಕದಲ್ಲಿ ಮೋಸ ಮಾಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಉಪ ಉತ್ಪನ್ನದಲ್ಲಿ ರೈತರಿಗೆ ಪಾಲು ನೀಡಲು ಸಮಿತಿ ರಚಿಸಿದ್ದಂತೆ ಕಟಾವು ಮತ್ತು ಸಾಗಾಣಿಕ ದರದ ಬಗ್ಗೆಯೂ ಎರಡು ತಿಂಗಳ ಒಳಗಾಗಿ ಸಮಿತಿ ರಚಿಸುತ್ತೇವೆ. ಸರ್ಕಾರಿ ಕಾರ್ಖಾನೆಗಿಂತ ಖಾಸಗಿ ಕಾರ್ಖಾನೆಗಳೇ ಹೆಚ್ಚಿವೆ ಅವರು ನ್ಯಾಯಾಲಯಕ್ಕೆ ಹೋಗಬಹುದು. ಹಾಗಾಗಿ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಂಡು ನಂತರವೇ ಈ ಬಗ್ಗೆ ನಿರ್ಣಯ ಪ್ರಕಟಿಸಲಾಗುತ್ತದೆ ಎಂದರು.
ವಂಚನೆ ಮಾಡದಂತೆ ಲಕ್ಷ್ಮಣ ಸವದಿ ಮನವಿ: ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, 21 ಕಡೆ ದಾಳಿ ಮಾಡಿದ್ದೀರಿ, ಆದರೆ ಎಲ್ಲಿಯೂ ತೂಕದಲ್ಲಿ ಮೋಸ ಮಾಡಿರುವ ದಾಖಲೆ ನಿಮಗೆ ಸಿಕ್ಕಿಲ್ಲ. ವಾಟ್ಸ್ ಆಪ್ ನಲ್ಲಿ ಒಂದು ನೈಜ ವಿಡಿಯೋ ನೋಡಿದ್ದೇನೆ. ಅದರಲ್ಲಿ 9 ತಿಂಗಳ ಗರ್ಭಿಣಿ ಕಬ್ಬು ಕಟಾವಿಗೆ ಬಂದಿದ್ದಳು, ಕಬ್ಬಿನ ಗದ್ದೆಯಲ್ಲೇ ಹೆರಿಗೆಯಾಗಿತ್ತು. ಮೂರು ದಿನದ ವಿರಾಮ ಪಡೆದು ಮಗುವನ್ನು ಅಲ್ಲೇ ಇರಿಸಿಕೊಂಡು ಕಬ್ಬು ಕಟಾವು ಮಾಡುತ್ತಿದ್ದಳು, ಅಂತಹ ಬಡವರು ರಕ್ತ ಸುರಿಸಿ, ಬೆವರು ಹರಿಸಿ ಕೆಲಸ ಮಾಡಿದ ಕೂಲಿಯ ಹಣದಲ್ಲಿ ಎರಡು ಟನ್ ಹೊಡೆದರೆ ನಿಮಗೆ ಒಳ್ಳೆಯದಾಗುತ್ತದೆಯಾ?.ಯಾರು ಇಂತಹ ವಂಚನೆ ಮಾಡುತ್ತಿದ್ದೀರೋ ಅದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.
ಮುರುಗೇಶ್ ನಿರಾಣಿಗೆ ಅನುಮತಿ ನಿರಾಕರಣೆ: ಈ ವೇಳೆ ಸಚಿವ ಮುರುಗೇಶ್ ನಿರಾಣಿ ಮಾತನಾಡಲು ಎದ್ದು ನಿಂತಾಗ ಸಭಾಪತಿ ಅನುಮತಿ ನಿರಾಕರಿಸಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅವರೂ ಮಂತ್ರಿ, ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ ಅವರಿಗೆ ಮಾತನಾಡಲಿ ಬಿಡಿ ಎಂದು ಆಗ್ರಹಿಸಿದರು. ಆದರೆ ಅವಕಾಶಕ್ಕೆ ಸಭಾಪತಿ ನಿರಾಕರಿಸಿದರು. ಇದನ್ನು ಖಂಡಿಸಿ ಮರಿತಿಬ್ಬೇಗೌಡ ಸೇರಿ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಅವಕಾಶ ಕೊಡುವ ಭರವಸೆ ನಂತರ ಧರಣಿ ಕೈಬಿಟ್ಟರು.
ಪರಿಶೀಲನೆ ಮಾಡಿ ಕ್ರಮ: ಬಳಿಕ ಮಾತನಾಡಿದ ಸಚಿವ, ಮುನೇನಕೊಪ್ಪ 21 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದೇವೆ. ತೂಕದಲ್ಲಿ ಮೋಸವಾಗುತ್ತಿದೆ ಎನ್ನುವ ಆರೋಪ ಬಂದಿದೆ. ಹಾಗಾಗಿ ದಾಳಿ ಮಾಡಿದ್ದೇವೆ. ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಸಂಪೂರ್ಣ ಮಾಹಿತಿ ಸರ್ಕಾರದ ಬಳಿ ಇದೆ. ಇದು ನಿರಂತರವಾಗಿ ನಡೆಯಲಿದೆ. ಎಲ್ಲವನ್ನೂ ಪರಿಶೀಲನೆ ಮಾಡಿ ಯಾವ ಕಾರ್ಖಾನೆ ವಿರುದ್ಧ ತೂಕದಲ್ಲಿ ಮೋಸ ಮಾಡುತ್ತಿದ್ದಾರೋ ಪಕ್ಷಾತೀತವಾಗಿ ಎಷ್ಟೇ ದೊಡ್ಡವರಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ರೈತರ ಹಿತಕಾಯುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದರು.
ಆದರೆ ಪ್ರತಿಪಕ್ಷಗಳು ನಿರಾಣಿ ಮಾತಿಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದವು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಹಲವಾರು ಆಯಾವಗಳಿವೆ. ಪ್ರತ್ಯೇಕವಾಗಿ ತನ್ನಿ, ಸಭಾತಪಿ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ನಾನೇ ಸ್ವತಃ ಅರ್ಧ ಗಂಟೆ ಚರ್ಚೆಗೆ ಅವಕಾಶ ಕಲ್ಪಿಸುತ್ತೇನೆ ಎಂದು ರೂಲಿಂಗ್ ನೀಡಿ ವಿವಾದಕ್ಕೆ ತೆರೆ ಎಳೆದರು.
ಸಿಎಂ ಹೇಳಿಕೆಗೆ ಆಕ್ಷೇಪ: ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದವು. ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಸಿಎಂ, ನೀವೇಳಿದಂತೆ ಸದನ ನಡೆಸಲಾಗಲ್ಲ. ಇಂದೇ ಅರ್ಧಗಂಟೆ ಚರ್ಚೆ ನಡೆಸಿ ಆಗ ನಿರಾಣಿಯವರೂ ಮಾತನಾಡಲಿ. ಇದಕ್ಕೆ ಸಭಾಪತಿ ಸಹಮತ ವ್ಯಕ್ತಪಡಿಸಿ ಇಂದೇ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಆದರೆ ನೀವು ಹೇಳಿದಂತೆ ಸನದ ನಡೆಸಲಾಗಲ್ಲ ಎನ್ನುವ ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸರ್ಕಾರ ಹೇಳಿದಂತೆಯೇ ಕೇಳಬೇಕು ಎನ್ನುವ ನಿಯಮವಿಲ್ಲ, ನಿರಾಣಿಗೆ ಈಗಲೇ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಸಭಾಪತಿ ಸೂಚನೆ ಮೇರೆಗೆ ಮಾತನಾಡಿದ ನಿರಾಣಿ: ಬಳಿಕ ಸಭಾಪತಿಗಳ ಸೂಚನೆ ಮೇರೆಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ನನ್ನ ಮಾತಿಗೆ ಯಾಕೆ ಅವಕಾಶ ನಿರಾಕರಣೆ ಮಾಡಿದಿರಾ ಎಂದೇ ಗೊತ್ತಾಗಲಿಲ್ಲ. ಸಚಿವರು ಬಿಟ್ಟ ಅಂಶ ಹೇಳಲು ನಿಂತಿದ್ದೆ ಅಷ್ಟೆ. ನನಗೂ ಅನುಭವ ಇದೆ. ಸಣ್ಣ ಸಣ್ಣ ಕಾರ್ಖಾನೆ ನಡೆಸುತ್ತಿದ್ದೇನೆ. ಒಂದು ಟನ್ ಕಬ್ ಗೆ ಎಷ್ಟು ಎಥೆನಾಲ್ ಬರುತ್ತದೆ ಎಂದು ಕೇಳಿದ್ದಾರೆ. ಅದಕ್ಕೆ ಸಕ್ಕರೆ ಸಚಿವರು ಉತ್ತರಿಸಿರಲಿಲ್ಲ. ಆದರೆ ಎಥೆನಾಲ್ ಉತ್ಪಾದನೆಯಲ್ಲಿ ಏಷ್ಯಾದಲ್ಲೇ ನಿರಾಣಿ ಮಾಡುತ್ತಿದ್ದಾರೆ. ದಿನಕ್ಕೆ 25 ಲಕ್ಷ ಲೀಟರ್ ಉತ್ಪಾದನೆ ಮಾಡುತ್ತಿದ್ದೇನೆ.
ನನಗೂ ಸ್ವಲ್ಪ ಅನುಭವ ಇದೆ.ಅದಕ್ಕೆ ಹೇಳಲು ಎದ್ದಿದ್ದೆ. 1 ಟನ್ ಕಬ್ಬಿಗೆ 10 ಪರ್ಸೆಂಟ್ ರಿಕವರಿ ಆಗಲಿದೆ. ಎಫ್ಆರ್ಪಿ ಯಡಿ ಪ್ರತಿ ವರ್ಷ ಒಂದು ಸಮಿತಿ ರಚನೆಯಾಗಲಿದೆ. ಒಟ್ಟು ಆದಾಯದ ಆಧಾರದಲ್ಲಿ ಎಷ್ಟು ಬೆಲೆ ಕೊಡಬೇಕು ಎಂದು ವರದಿ ತಿಳಿಸಿದೆ. ಅದನ್ನು ಎಲ್ಲರೂ ಒಪ್ಪಿದ್ದಾರೆ. ಎಫ್.ಆರ್.ಪಿ ದರ ಅಂತಿಮವಿದೆ. 32 ಕೆಜಿಗೆ ಸಕ್ಕರೆ. 48 ರೂ. ಮೊಲ್ಯಾಸಿಸ್, 63 ರೂ. ಸಕ್ಕರೆ ಮತ್ತು ಮೊಲ್ಯಾಸಿಸ್, 65 ರೂ. ಪ್ಯೂರ್ ಜ್ಯೂಸ್ ಗೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಸರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆ ಕುರಿತು ಸದನದಲ್ಲಿ ಚರ್ಚಿಸಿದ ಬಳಿಕ ತೀರ್ಮಾನ : ಸಿಎಂ ಬೊಮ್ಮಾಯಿ
ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಯಲ್ಲಿ 300 ರೂ. ಮಾತ್ರ ವ್ಯತ್ಯಾಸ ಬರಲಿದೆ ಅಷ್ಟೆ. ಎಲ್ಲ ರೈತರೂ ಇಂದು ಪ್ರಜ್ಞಾವಂತರಿದ್ದಾರೆ. ಕಾರ್ಖಾನೆ ಹೊರಗಡೆ ಉಚಿತವಾಗಿ ವೇ ಬ್ರಿಡ್ಜ್ ನಲ್ಲಿ ತೂಕ ಮಾಡಿಕೊಡಲಾಗುತ್ತದೆ. ಹಾಗಾಗಿ ತೂಕದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ನನ್ನದೊಂದೆ ಕಾರ್ಖಾನೆ ಅಲ್ಲ ಎಲ್ಲಾ ಕಾರ್ಖಾನೆಯಲ್ಲೂ ಮೋಸ ಅಸಾಧ್ಯ. ಎರಡು ಮೂರು ಕೆಜಿ ಬರಬಹುದು ಅಷ್ಟೆ. ತೂದಲ್ಲಿ ವ್ಯತಾಸ ಸಾಧ್ಯವಿಲ್ಲ ಎಂದು ಸವದಿ ಆರೋಪ ತಳ್ಳಿ ಹಾಕಿದರು.
ನಂತರ ಅರ್ಧಗಂಟೆ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಪ್ರತಿಪಕ್ಷ ಸದಸ್ಯರು ಬೇಡಿಕೆ ಇಟ್ಟರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಮುರುಗೇಸ್ ನಿರಾಣಿ ಅವರ ಜಿಲ್ಲೆಯ ವಿವರ ನೀಡಿ ತೂಕದಲ್ಲಿ ಮೋಸಲವಾಗಲ್ಲ ಎಂದಿದ್ದಾರೆ ಅದಕ್ಕೆ ಅಭಿನಂದಿಸುತ್ತೇನೆ ಆದರೆ ಸಾರಾಸಗಟಾಗಿ ಎಲ್ಲಾ ಜಿಲ್ಲೆಯ ಎಲ್ಲಾ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸವಾಗುತ್ತಿಲ್ಲ ಎನ್ನುವುದನ್ನು ನಾವು ಒಪ್ಪುವುದಿಲ್ಲ. ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಿ, ನಾನು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೇನೆ, ಯಾವ ರೀತಿ ಮೋಸ ಎಂದು ಬಹಿರಂಗಪಡಿಸುತ್ತೇನೆ ಎಂದರು. ನಂತರ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುವ ರೂಲಿಂಗ್ ನೀಡಿ ಕಬ್ಬು ಗದ್ದಲ್ಲೆ ತೆರೆ ಎಳೆದರು.