ಬೆಂಗಳೂರು: ವಿಧಾನ ಪರಿಷತ್ ಭೋಜನ ವಿರಾಮದ ನಂತರವೂ ಸಂವಿಧಾನದ ಮೇಲಿನ ಚರ್ಚೆ ಮುಂದುವರೆಯಿತು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸರ್ಕಾರಕ್ಕೆ ಧರ್ಮ ಇರಬಾರದು ಎಂದು ಅಂಬೇಡ್ಕರ್ ಸಂವಿಧಾನ ತಂದರು. ಎಲ್ಲಿಯೂ ವಿವಾದಕ್ಕೆ ಒಳಗಾಗದ ರೀತಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲಾ ವರ್ಗದವರಿಗೂ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಶೋಷಿತರಿಗೆ ಸಿಗದ ಶಿಕ್ಷಣ, ಸಮಾನತೆ, ಶೋಷಣೆಯ ವಿರುದ್ಧದ ಹಕ್ಕನ್ನು ಜನರಿಗೆ ನೀಡಿದ್ದರು ಎಂದು ಹೇಳಿದರು.
ಇಂದಿಗೂ ಜೀತ ಪದ್ಧತಿ ಜೀವಂತ ಇದೆ. ವರ್ಷಕ್ಕೆ ಒಂದರಿಂದ ನಾಲ್ಕು ಸಾವಿರ ರೂ. ವೇತನ ಪಡೆಯುವವರು ಇದ್ದಾರೆ. ಬಾಲ ಕಾರ್ಮಿಕರು ಹಲವರಿದ್ದಾರೆ. ಈ ರೀತಿ ಶೋಷಣೆ, ಮೇಲು-ಕೀಳು ಎಂಬಾ ಭಾವನೆ ಇಂದಿಗೂ ಜಾರಿಯಲ್ಲಿದೆ. ಕಾನೂನಿನಲ್ಲಿ ಅಸಮಾನತೆ ಇಲ್ಲದಿದ್ದರೂ ಆಚರಣೆಯಲ್ಲಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಆಚರಣೆ ಹೇಗಿದೆ ಎನ್ನುವುದನ್ನು ಅರಿಯಬೇಕಾಗಿದೆ. 70 ವರ್ಷದಲ್ಲಿ ಬಹಳಷ್ಟು ಮಂದಿ ಮೇಧಾವಿಗಳು ಆಯ್ಕೆಯಾಗಿ ಹೋಗಿದ್ದಾರೆ. ಆದರೆ ನೆನಪಿನಲ್ಲಿ ಉಳಿಯುವಂತವರು ಕೆಲವರು ಮಾತ್ರ. ದೇಶದ ಇತಿಹಾಸದಲ್ಲಿ ಹಿಂದುಗಳಷ್ಟೇ ಮುಸಲ್ಮಾನರ ಕೊಡುಗೆಯೂ ಸಾಕಷ್ಟಿದೆ. ಜಾತ್ಯತೀತ ಸಂವಿಧಾನವನ್ನು ಅಂಬೇಡ್ಕರ್ ನೀಡಿರುವುದೇ ಇದಕ್ಕೆ ಪ್ರೇರಣೆ. ಅಂಬೇಡ್ಕರ್ ಕನಸಿನ ಸಂವಿಧಾನವನ್ನು ಆಚರಣೆಗೆ ತರಬೇಕಾದರೆ ಅವರ ಆಶಯ ಈಡೇರಿಸುವ ಕಾರ್ಯ ಆಗಬೇಕು. ಬಡವರಿಗೆ, ಹೆಣ್ಣು ಮಕ್ಕಳಿಗೆ ಈ ಚುನಾವಣೆ ವ್ಯವಸ್ಥೆ ಭರಿಸಲಾಗದ್ದು. ಚುನಾವಣಾ ಆಯೋಗದ ಪ್ರಕಾರ ನಿಗದಿಪಡಿಸಿರುವ ಮೊತ್ತಕ್ಕೆ ಸೀಮಿತವಾಗಿ ಚುನಾವಣೆಗೆ ಹೋದರೆ ಯಾರೂ ಗೆಲ್ಲಲಾಗದು. ಪ್ರಜಾಪ್ರಭುತ್ವ ಹಣ, ಅಧಿಕಾರ ಉಳ್ಳವರ ಸ್ವತ್ತಾಗಿದೆ. ಹಣ ಇಲ್ಲದೇ ಗೆಲ್ಲಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸೂಳ್ಯ ಶಾಸಕ ಅಂಗಾರ ಅವರ ಉದಾಹರಣೆ ನೀಡಿದ ರವಿಕುಮಾರ್, 10 ಲಕ್ಷ ರೂ.ನಲ್ಲಿ ಚುನಾವಣೆ ಮುಗಿಸುತ್ತಾರೆ ಎಂದಾಗ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಮೊದಲ ಚುನಾವಣೆ ಎದುರಿಸಿ ಗೆದ್ದು ಬಂದಿದ್ದ ಅಂಗಾರ ನನ್ನ ಬಳಿ ತುಂಬಾ ಖರ್ಚಾಯಿತು ಅಂದಿದ್ದರು. ಎಷ್ಟು ಖರ್ಚಾಯಿತು ಅಂತ ಕೇಳಿದ್ದಕ್ಕೆ 35 ಸಾವಿರ ರೂ. ಖರ್ಚಾಗಿ ಹೋಯಿತು ಎಂದರು. ಇಂದು ನೋಡಿದರೆ ಇದೊಂದು ಮೊತ್ತವೇ ಅಲ್ಲ. ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡುತ್ತಾರೆ. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎನ್ನುವುದು ಸಂವಿಧಾನದ ಉದ್ದೇಶ. ಇಂದು ಆಗುತ್ತಿರುವ ಖರ್ಚು ಗೊತ್ತಿದ್ದರೆ ಅಂಬೇಡ್ಕರ್ ಅಂದು ಸಂವಿಧಾನವನ್ನೇ ಸಿದ್ಧಪಡಿಸುತ್ತಿರಲಿಲ್ಲವೇನೋ. ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ಅರ್ಥವೇ ಆಗುತ್ತಿಲ್ಲ ಎಂದಾಗ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸದನದಲ್ಲಿ ಎಲ್ಲಾ ಪಕ್ಷದ ಸದಸ್ಯರು ತಮ್ಮ ಅನುಭವ ಹಾಗೂ ಅಭಿಪ್ರಾಯ ತಿಳಿಸಿದರು.
ಸದನದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದರು. ರವಿಕುಮಾರ್ ಮಾತು ಮುಂದುವರೆಸಿ, ಅಂಬೇಡ್ಕರ್ ಸಂವಿಧಾನ ತರದಿದ್ದರೆ ಎಸ್ಸಿ, ಎಸ್ಟಿ ಸಮುದಾಯದವರು ಎಂಪಿ, ಎಂಎಲ್ಎ, ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಲು ಸಾಧ್ಯವಿರಲಿಲ್ಲ. ಮೀಸಲಾತಿ ತಂದಿದ್ದರಿಂದ ಇವರು ಹೋರಾಡುವ ಶಕ್ತಿ ಪಡೆದಿದ್ದಾರೆ. ಹೋರಾಡುವ ಕೈಗೆ ಅಧಿಕಾರ ಸಿಗಬೇಕು ಎನ್ನುವುದು ಅಂಬೇಡ್ಕರ್ ಆಶಯವಾಗಿತ್ತು. ಅವರ ಆಶಯ ಎಷ್ಟು ಈಡೇರಿದೆ ಎನ್ನುವ ಕುರಿತು ಚಿಂತನೆ ನಡೆಸಬೇಕಾಗಿದೆ. ದೇಶದಲ್ಲಿ ಮೂಲಭೂತ ಹಕ್ಕುಗಳು ಸಮಾನವಾಗಿರಬೇಕು. ಆದರೆ ಅದು ಇಂದು ಕಾಣಿಸುತ್ತಿಲ್ಲ. ಸಮಾನ ನಾಗರಿಕ ಕಾಯ್ದೆ ಬೇಕು ಎಂದು ಅವರು ಹೇಳಿದ್ದರು. ಈ ವಿಚಾರ ಚರ್ಚೆ ಆಗಬೇಕಿದೆ ಎಂದರು.