ಬೆಂಗಳೂರು: ಮೊಬೈಲ್ ಬಳಕೆದಾರರ ವೈಯುಕ್ತಿಕ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಡಿಜಿಟಲ್ ದತ್ತಾಂಶ ಸುರಕ್ಷತಾ ಕಾನೂನು ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು, ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಪ್ಪಿಗೆ ಪತ್ರಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡಿರುವುದು ಕೇಂದ್ರ ಸರ್ಕಾರಕ್ಕೆ ದೇಶದ ಜನತೆಯ ದತ್ತಾಂಶ ಸಂಗ್ರಹಣೆ ವಿಷಯದಲ್ಲಿ ಇರುವ ಕಾಳಜಿಗೆ ಸಾಕ್ಷಿ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ 'ಸಂಸದ್ ಧ್ವನಿ'ಯ ಆವೃತ್ತಿಯು ಈ ಬಾರಿ ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅನುಮೋದನೆಗೊಂಡ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್ ಕುರಿತಾಗಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಸಂಸತ್ತಿನಲ್ಲಿ ಅನುಮೋದನೆಗೊಳ್ಳುವ ಕಾಯ್ದೆ, ಕಾನೂನುಗಳ ಕುರಿತಾಗಿ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೊಬೈಲ್ ಆ್ಯಪ್ಗಳ ಬಳಕೆಗೆ ಇರುವ ಅನುಮತಿ, ಒಪ್ಪಿಗೆ ಫಾರ್ಮ್ಗಳನ್ನು ಅತ್ಯಂತ ಸರಳೀಕರಣಗೊಳಿಸಿ, ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಗೊಳಿಸುವುದರಿಂದ ಅತ್ಯಂತ ಸಾಮಾನ್ಯ ನಾಗರಿಕನಿಗೂ ಕೂಡ ತನ್ನ ವೈಯುಕ್ತಿಕ ದತ್ತಾಂಶ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂಬ ಅರಿವು ಮೂಡಲು ಸಾಧ್ಯ. ಇಂತಹ ಕ್ರಮಗಳಿಂದ ದತ್ತಾಂಶ ಸೋರಿಕೆ ಕೂಡ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಈ ಕಾನೂನು ಜಾರಿಗೆ ಬರುವ ನಿಟ್ಟಿನಲ್ಲಿ ಬೆಂಗಳೂರಿನ ಕೊಡುಗೆಯೂ ಅಪಾರ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನಮ್ಮ ಕರ್ನಾಟಕದವರು. ನಾನೂ ಕೂಡ ಜಂಟಿ ಸದನ ಸಮಿತಿಯ ಸದಸ್ಯನಾಗಿದ್ದು, ನಗರದ ಅನೇಕ ವಕೀಲರು, ವಿಷಯ ತಜ್ಞರಾದ ಶರದ್ ಶರ್ಮಾರಂತಹ ಬೆಂಗಳೂರಿನ ಅನೇಕರು ಈ ಕಾನೂನು ಜಾರಿಗೆ ಬರುವಲ್ಲಿ ಶ್ರಮಿಸಿದ್ದು ಶ್ಲಾಘನೀಯ ಎಂದರು.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, 2010ರಿಂದ ರಾಜ್ಯಸಭಾ ಸದಸ್ಯರಾಗಿ ಈ ಕಾಯ್ದೆ ಜಾರಿಗೆ ಪಟ್ಟ ಶ್ರಮದ ಬಗ್ಗೆ ವಿವರಿಸಿದರು. ವೈಯುಕ್ತಿಕ ದತ್ತಾಂಶ ಸುರಕ್ಷತೆ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ದೇಶದಲ್ಲಿ ರೂಪುಗೊಳ್ಳುವ ಯಾವುದೇ ಕಾನೂನು ಕೂಡ ಸಾರ್ವಜನಿಕರ ಹಿತಾಸಕ್ತಿಗೆ ಪ್ರಥಮ ಆದ್ಯತೆ ಎಂದು ವಿವರಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ತೇಜಸ್ವಿ ಸೂರ್ಯ
ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಗೊಳಿಸಲು ಸುಧಾರಣೆ: ಇ-ಸ್ವತ್ತು ಕಾರ್ಯಕ್ರಮದಡಿ ನೀಡಲಾಗುತ್ತಿರುವ ದಾಖಲೆಗಳನ್ನು ಪಡೆಯಲು ಆಗುತ್ತಿರುವ ಸಮಸ್ಯೆಗಳಲ್ಲಿ ಸುಧಾರಣೆ ತಂದು ಯೋಜನೆಯನ್ನು ರೂಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಇತ್ತೀಚೆಗೆ ಸೂಚನೆ ನೀಡಿದ್ದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯೇತರ ಭೂಮಿಯಲ್ಲಿ ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಇ-ಸ್ವತ್ತು ಕಾರ್ಯಕ್ರಮದಡಿ ನೀಡಲಾಗುತ್ತಿರುವ ದಾಖಲೆಗಳನ್ನು ಪಡೆಯಲು ಆಗುತ್ತಿರುವ ಸಮಸ್ಯೆಗಳಲ್ಲಿ ಸುಧಾರಣೆ ತಂದು ಯೋಜನೆಯನ್ನು ಜನಸ್ನೇಹಿಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಇದನ್ನೂ ಓದಿ: ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಗೊಳಿಸಲು ಸುಧಾರಣೆ ಮಾಡಿ: ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ