ಬೆಂಗಳೂರು: ''ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕವನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು'' ಎಂದು ಶಾಸಕ ಎನ್ಹೆಚ್ ಕೋನರೆಡ್ಡಿ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಇಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ''ಹೈದರಾಬಾದ್ ಕರ್ನಾಟಕಕ್ಕೆ 371ಜೆ ಸ್ಥಾನಮಾನ ದೊರೆತಿದೆ. ಅದೇ ಮಾದರಿಯಲ್ಲಿ ಕಿತ್ತೂರು ಕರ್ನಾಟವನ್ನು ಅಭಿವೃದ್ಧಿ ಪಡಿಸಲು ಎಲ್ಲಾ ಶಾಸಕರು ಒಟ್ಟಾಗಿ ಕೆಲಸ ಮಾಡಬೇಕು'' ಎಂದು ಮನವಿ ಮಾಡಿದರು.
''1994-95ರ ನಂತರದ ಸಾಲಗಳಿಗೆ ಅನುದಾನ ನೀಡಬೇಕು. ಈ ಹಿಂದೆ ನೆರೆ ಹಾವಳಿಯ ವೇಳೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ ಸರ್ಕಾರ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಇವರನ್ನು ನಂಬಿ ಸಂತ್ರಸ್ತರು ಮನೆ ಕೆಡವಿ ಕುಳಿತಿದ್ದಾರೆ. ನಮ್ಮ ಸರ್ಕಾರ ಹಿಂದಿನ ಸರ್ಕಾರದ ಯೋಜನೆಗಳು ಎಂಬ ನಿರ್ಲಕ್ಷ್ಯ ವಹಿಸಬಾರದು'' ಎಂದು ಸಲಹೆ ನೀಡಿದರು.
''ಉತ್ತರ ಕರ್ನಾಟಕ ಭಾಗದ ರೈತರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು. ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರದಿಂದ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬೇಕು'' ಎಂದು ಹೇಳಿದರು.
ರಸ್ತೆ ಸರಿಯಾಗಿದ್ದರೆ ರಾಜೀನಾಮೆ: ಹರಿಹರ ಕ್ಷೇತ್ರದಲ್ಲಿ ಒಂದೇ ಒಂದು ಕಿ.ಮೀ ರಸ್ತೆ ಸರಿಯಾಗಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಬಿ ಪಿ ಹರೀಶ್ ಸವಾಲು ಹಾಕಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುತ್ತಿದ್ದ ಅವರು, ಇಟ್ಟಿಗೆ ಉದ್ಯಮ ಜೋರಾಗಿ ನಡೆಯುತ್ತಿದೆ. 30 ರಿಂದ 40 ಟನ್ ಮರಳು ಮತ್ತು ಮಣ್ಣು ತುಂಬಿದ ಲಾರಿಗಳು ಸಂಚರಿಸುತ್ತವೆ. ರಸ್ತೆ ಒಂದೇ ಒಂದು ಕಿ. ಮೀ. ನಷ್ಟು ಸರಿಯಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವರು ಬಂದು ಪರಿಶೀಲಿಸಲಿ. ರಸ್ತೆ ಸರಿಯಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ'' ಎಂದು ಸವಾಲು ಹಾಕಿದರು.
ಆಗ ಮಧ್ಯಪ್ರವೇಶಿಸಿದ ಇಂಧನ ಸಚಿವ ಕೆ ಜೆ ಜಾರ್ಜ್, 4 ವರ್ಷ ಬಿಜೆಪಿಯ ಸರ್ಕಾರವೇ ಇತ್ತು. ಆಗ ಪ್ರಶ್ನೆ ಮಾಡಲಿಲ್ಲ. ಹೆಚ್ಚು ಅಭಿವೃದ್ಧಿ ಮಾಡಲಿಲ್ಲ. ಈಗ ಟೀಕೆ ಮಾಡುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದರೂ ಹರಿಹರದಲ್ಲಿ ಬಿಜೆಪಿ ಶಾಸಕರಿರಲಿಲ್ಲ. ಈಗ ನಾನು ಆಯ್ಕೆಯಾಗಿದ್ದೇನೆ. ನನಗೆ ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಹರೀಶ್ ಪ್ರತ್ಯುತ್ತರಿಸಿದರು.
ಕಾಂಗ್ರೆಸ್ ಸರ್ಕಾರದ ಪಂಚಖಾತ್ರಿ ಯೋಜನೆಯಿಂದಾಗಿ ಇತರ ಅಭಿವೃದ್ಧಿಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಪಂಚಖಾತ್ರಿಯನ್ನು ಈಡೇರಿಸುವ ಒತ್ತಡದಲ್ಲಿ ಸರ್ಕಾರ ಸುಸ್ತಾಗಿದೆ. ಯಾವ ಸಚಿವರ ಮುಖದಲ್ಲೂ ನಗುವಿಲ್ಲ. ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯ ಕ್ಷೇತ್ರಗಳು ಸೊರಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸಿಗರು ಅಕ್ಕಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಪ್ರಧಾನಿಯವರು ಅಕ್ಕಿ ನೀಡುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳು ಇದೇ ರೀತಿಯ ಭರವಸೆಗಳನ್ನು ಕೊಟ್ಟರೆ ಕೇಂದ್ರ ಸರ್ಕಾರ ಅದನ್ನು ಈಡೇರಿಸಲು ಸಾಧ್ಯವೇ, ಕಾಂಗ್ರೆಸ್ನ ಕೆಟ್ಟ ಆಶ್ವಾಸನೆಗಳಿಂದಾಗಿ ಜನ ಕೆಲಸ ಮಾಡದೆ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಮುರಾರ್ಜಿ ದೇಸಾಯಿ ಶಾಲೆಗಳನ್ನು ಹೆಚ್ಚಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪಂಚಖಾತ್ರಿ ಯೋಜನೆಗಳಿಂದ ಕಾಂಗ್ರೆಸ್ ಕರ್ನಾಟಕವನ್ನು ಪಾಕಿಸ್ತಾನ ಮಾಡಿಬಿಡಬಹುದು ಎಂಬ ಭಯ ಕಾಡುತ್ತಿದೆ ಎಂದು ಹೇಳಿದರು.
ಮರಳು ದಂಧೆ ನಿಯಂತ್ರಣಕ್ಕೆ ಒತ್ತಾಯ: ಮರಳು ದಂಧೆ ನಿಯಂತ್ರಣಕ್ಕೆ ಗೃಹ ಸಚಿವರು ಕ್ರಮ ಕೈಗೊಳ್ಳಬೇಕೆಂದು ಶಾಸಕಿ ಲತಾ ಮಲ್ಲಿಕಾರ್ಜುನ್ ಒತ್ತಾಯಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ದೇವದಾಸಿ ಪದ್ಧತಿಯೂ ಇದೆ. ಮರಳು ದಂಧೆಯು ನಡೆಯುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದರು.
ರಾಜ್ಯ ಸರ್ಕಾರ 5 ಗ್ಯಾರಂಟಿಯನ್ನು ಸ್ವಾಗತಿಸುತ್ತೇನೆ. ಹಿಂದುಳಿದ ಪ್ರದೇಶದಿಂದ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಬೇಕು. ಮಹಿಳೆಯರು ಮನೆಯಿಂದ ಹೊರಗೆ ಬರುವುದೇ ಕಷ್ಟ. ನೂರು ಜನರನ್ನು ಕರೆದರೆ ಒಬ್ಬರು ಬರುತ್ತಾರೆ. ಸಾರಿಗೆ ಸಂಸ್ಥೆಗಳ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಅನುಕೂಲಕರವಾಗಿದೆ. ಮನೆಯೊಡತಿಗೆ ಮಾಸಿಕ 2 ಸಾವಿರ ನೀಡುವ ಗೃಹ ಯೋಜನೆಯು ಒಳ್ಳೆಯದು. ಹೀಗಾಗಿ ಮಹಿಳೆಯರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಕುಡಿಯುವ ನೀರಿನ ಘಟಕ ಸರಿಪಡಿಸಿ: ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದ್ದು, ಅವುಗಳನ್ನು ದುರಸ್ತಿಗೊಳಿಸಿ ಗ್ರಾಮ ಪಂಚಾಯ್ತಿಗಳಿಗೆ ವಹಿಸಬೇಕೆಂದು ಕಾಂಗ್ರೆಸ್ ಶಾಸಕ ಚನ್ನರೆಡ್ಡಿ ಸಲಹೆ ನೀಡಿದರು.
ಯಾದಗಿರಿ ಕ್ಷೇತ್ರದಲ್ಲಿ 411 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 162 ಕೆಟ್ಟುಹೋಗಿವೆ. 42 ಸ್ಕ್ರಾಪ್ ಆಗಿವೆ. ಶಾಸಕರಿಗೆ ನಿತ್ಯ ದೂರು ಬರುತ್ತಿವೆ. ಇದನ್ನು ತಪ್ಪಿಸಿ ಎಂದರು. ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಚೆನ್ನಾಗಿ ನಡೆಯುತ್ತಿಲ್ಲ. ಶಾಲಾ ಮಕ್ಕಳಿಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ. ಈ ಶಾಲೆಗೆ ಹೋಗುವ ಮಕ್ಕಳು ನಿತ್ಯ ಪರದಾಡುವಂತಾಗಿದೆ ಎಂದು ಹೇಳಿದರು.
ಜನರ ನೆರವಿಗೆ ಧಾವಿಸಬೇಕು: ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಿ ಸಮುದ್ರ ಕೊರತೆದಿಂದ ತೆಂಗಿನಮರ ಸಮುದ್ರ ಪಾಲಾಗಿದ್ದು, ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಶಾಲೆಯೂ ಹಾಳಾಗಿದೆ. ರಸ್ತೆಯೂ ಹದಗೆಟ್ಟಿದೆ. ಅಧಿಕಾರಿಗಳನ್ನು ಕೇಳಿದರೆ ನಯಾಪೈಸೆ ಹಣವಿಲ್ಲವೆಂದು ಕೈಚೆಲ್ಲಿದ್ದಾರೆ. ಕೇಂದ್ರ ಸರ್ಕಾರ ಎಸ್ಡಿಆರ್ಎಫ್ ಅನುದಾನವನ್ನು ಬಿಡುಗಡೆ ಮಾಡಿದ್ದು, ಅತಿವೃಷ್ಟಿಯಿಂದ ಆಗಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದರು.
ರಾಜ್ಯಪಾಲರ ಭಾಷಣದಲ್ಲಿ ತುಳುನಾಡಿನ ದೇವಾಲಯಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪವಾಗಿಲ್ಲ. ಕೃಷಿ ಸಮ್ಮಾನ್ ಯೋಜನೆ ಬಗ್ಗೆಯೂ ಪ್ರಸ್ತಾಪವಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕೆಂದು ಅವರು ಒತ್ತಾಯಿಸಿದರು.
ಇದೇ ವೇಳೆ ರಾಜ್ಯದ 224 ಕ್ಷೇತ್ರಗಳ ಪೈಕಿ ಕಟ್ಟಕಡೆಯ ವ್ಯಕ್ತಿ, ಜವಾನನಾಗಿದ್ದ ನನ್ನನ್ನು ಜಗಳೂರು ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಹೇಳಿದರು.
''ಕಾಂಗ್ರೆಸ್ ಪಕ್ಷ ಡಿ ಗ್ರೂಪ್ ನೌಕರನಿಗೆ ಟಿಕೆಟ್ ಕೊಟ್ಟಿದೆ. ಆಯ್ಕೆಯಾದರೆ ಯಾವ ರೀತಿ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂಬುದರ ಬಗ್ಗೆ ಜನರಿಗೆ ನಿರೀಕ್ಷೆ ಹೆಚ್ಚು ಇರುತ್ತೆ. ಕ್ಷೇತ್ರಗಳ 57 ಕೆರೆ ತುಂಬಿಸುವ ಯೋಜನೆ 2019ರಲ್ಲೇ ಪೂರ್ಣವಾಗಬೇಕಿತ್ತು. 2023 ಬಂದರೂ ಪೂರ್ಣಗೊಂಡಿಲ್ಲ. ಇದನ್ನು ಬೇಗ ಮುಗಿಸಬೇಕು ಎಂದರು. ನಂಜುಂಡಪ್ಪ ವರದಿಯಲ್ಲಿ ಜಗಳೂರು ಅತಿ ಹಿಂದುಳಿದ ತಾಲೂಕಾಗಿದೆ. ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಅಧಿಕಾರಿಗಳು ನೀರು ಬಿಡುವ ಬದಲು ರೈಲು ಬಿಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಗೃಹಜ್ಯೋತಿ ವಿಷಯದಲ್ಲಿ ಅನಗತ್ಯ ಸುಳ್ಳು ಪ್ರಚಾರ: ಸಚಿವ ಕೆ ಜೆ ಜಾರ್ಜ್