ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರು ಇಂದು ಜೆಡಿಎಸ್ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿದ್ದು, ಈ ಸಭೆಯಲ್ಲೂ ದೊಡ್ಡಗೌಡರು ಯಾವುದೇ ಕ್ಷಣದಲ್ಲೂ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ನೀವೆಲ್ಲರೂ ಸಿದ್ಧರಾಗಿರಿ ಎಂಬ ಪರೋಕ್ಷ ಸಂದೇಶವನ್ನು ನೀಡಿದ್ದಾರೆ.
ಜೆಪಿ ಭವನದಲ್ಲಿ ಸಭೆ ನಡೆಸಿದ ದೇವೇಗೌಡರು ವಿಧಾನಸಭಾ ಚುನಾವಣೆಯಲ್ಲಿನ ಜೆಡಿಎಸ್ ಪರಾಜಿತ ಅಭ್ಯರ್ಥಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಮಧು ಬಂಗಾರಪ್ಪ ಸೇರಿದಂತೆ 60ಕ್ಕೂ ಹೆಚ್ಚು ಪರಾಜಿತ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ದೊಡ್ಡಗೌಡರು ಪರಾಜಿತ ಅಭ್ಯರ್ಥಿಗಳಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿ, ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ತಮ್ಮ ಕ್ಷೇತ್ರಗಳಲ್ಲಿ ಬೂತ್ ಬಲವರ್ಧನೆ ಜೊತೆಗೆ, ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಕೂಡಲೇ ಚಾಲನೆ ನೀಡುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಚುನಾವಣೆಗೆ ಈಗಿನಿಂದಲೇ ಸಿದ್ಧರಾಗಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಚುನಾವಣೆ ತಕ್ಷಣ ಆಗಬಹುದು. ಇಲ್ಲವೇ ಮುಂದಿನ ವರ್ಷವೂ ಆಗಬಹುದು. ಚುನಾವಣೆ ಎದುರಿಸುವ ನಿಟ್ಟಿಲ್ಲಿ ಪಕ್ಷ ಬಲವರ್ಧನೆ ಮಾಡುವಂತೆ ಪರಾಜಿತ ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.
ನಾಳೆ ಮತ್ತೆ ಪರಾಜಿತ ಅಭ್ಯರ್ಥಿಗಳ ಸಭೆ ನಡೆಯಲಿದೆ. ಒಟ್ಟಿನಲ್ಲಿ ದೇವೇಗೌಡರು ಕಳೆದ ಕೆಲ ದಿನಗಳಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಎಲ್ಲರಿಗೂ ಪಕ್ಷ ಸಂಘಟನೆ ಮಾಡುವಂತೆ ಕರೆ ನೀಡುತ್ತಿದ್ದಾರೆ.