ಬೆಂಗಳೂರು : ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ 20 ದಿನಗಳ ಹಿಂದೆ ಪ್ಲಾಸ್ಟಿಕ್ ಡ್ರಮ್ ವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಸಿಕ್ಕಿದ್ದು, ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಈವರೆಗೂ ಕೊಲೆಯಾದ ಮಹಿಳೆಯ ಗುರುತು ಚಿದಂಬರ ರಹಸ್ಯದಂತೆಯೇ ನಿಗೂಢವಾಗಿದೆ. ಹೀಗಾಗಿ ತನಿಖೆಗೆ ಕೊಂಚ ಹಿನ್ನಡೆಯಾಗಿದೆ.
ಪ್ರಕರಣದ ವಿವರ: ಜನವರಿ 4ರಂದು ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನೀಲಿ ಬಣ್ಣದ ಡ್ರಮ್‌ನಲ್ಲಿ ಮಹಿಳೆಯ ಮೃತದೇಹ ರಕ್ತಸಿಕ್ತ, ಕೊಳೆತ ಸ್ಥಿತಿಯಲ್ಲಿತ್ತು. ಮೃತದೇಹವನ್ನು ಪ್ಲಾಸ್ಟಿಕ್ ಟೇಪ್‌ನಿಂದ ಸುತ್ತಿ ಅದರ ಮೇಲೆ ಬಟ್ಟೆಗಳನ್ನು ಮಡಚಿ ಮುಚ್ಚಳ ಹಾಕಲಾಗಿತ್ತು. ರೈಲ್ವೇ ಎಸ್ಪಿ ಸೌಮ್ಯಲತಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಮೃತಳ ಗುರುತು ಹಾಗೂ ಹಂತಕರ ಪತ್ತೆಗಾಗಿ ಯಶವಂತಪುರ ರೈಲ್ವೇ ನಿಲ್ದಾಣ ಇನ್‌ಸ್ಪೆಕ್ಟರ್ ಪ್ರಭಾಕರ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಮೃತ ಮಹಿಳೆ ಉತ್ತರ ಭಾರತದ ಮೂಲದವರು ಎಂದು ಶಂಕಿಸಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಈವರೆಗೂ ಮಹಿಳೆಯ ಗುರುತಾಗಲೀ ಅಥವಾ ಆರೋಪಿಗಳ ಬಗ್ಗೆ ಸ್ಪಷ್ಟ ಸುಳಿವಾಗಲೀ ಸಿಕ್ಕಿಲ್ಲ. ಹೀಗಾಗಿ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಲುಕ್ ಔಟ್ ನೋಟಿಸ್: ಇದುವರೆಗೂ ಮಹಿಳೆಯ ವಿಚಾರವಾಗಿ ಆಕೆಯ ಮನೆಯವರು ಅಥವಾ ಸಂಬಂಧಿಕರು ಯಾರೂ ಬಾರದೇ ಇರುವುದು ಪೊಲೀಸರ ನಿದ್ದೆಗೆಡಿಸಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬೀಡುಬಿಟ್ಟಿರುವ ರೈಲ್ವೇ ಪೊಲೀಸರಿಗೆ ಮೊದಲು ಆರೋಪಿಗಳಿಗಿಂತ ಮೃತಳ ಗುರುತು ಪತ್ತೆ ಹಚ್ಚುವ ಕಾಯಕದಲ್ಲಿ ನಿರತರಾಗಿದ್ದಾರೆ. ನಿರಂತರ ಶೋಧ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದೇ ಇದೀಗ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಹಿಳೆಯ ಮಾಹಿತಿ ನೀಡುವಂತೆ ಕೋರಲಾಗಿದೆ.
"ಪ್ಲಾಸ್ಟಿಕ್ ಡ್ರಮ್‌ನಲ್ಲಿ ದೊರೆತಿದ್ದ ಶವವನ್ನು ಆಗಂತುಕರು ವಿಶಾಖಪಟ್ಟಣದಿಂದ ನಗರಕ್ಕೆ ಬರುವ ರೈಲಿನಲ್ಲಿ ಸಾಗಾಟ ಮಾಡಿರುವುದು ಗೊತ್ತಾಗಿದೆ. ಇದೇ ಮಾಹಿತಿ ಆಧರಿಸಿ ವಿಶಾಖಪಟ್ಟಣದಿಂದ ಯಶವಂತಪುರದವರೆಗೂ ಬರುವ ರೈಲ್ವೇ ಪೊಲೀಸ್ ಠಾಣೆ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ಹೋಗಿ ಮಹಿಳೆ ಮಿಸ್ಸಿಂಗ್ ಆಗಿರುವ ಪ್ರಕರಣದ ಬಗ್ಗೆ ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದೆ. ವಿಶಾಖಪಟ್ಟಣದಿಂದ ಯಶವಂತಪುರದವರೆಗೂ ಸಿಗುವ ರೈಲ್ವೇ ಪೊಲೀಸ್ ಠಾಣೆ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಕರಪತ್ರವನ್ನು ಅಂಟಿಸಲಾಗಿದೆ."
"ಶವವಿದ್ದ ಪ್ಲಾಸಿಕ್ಟ್ ಡ್ರಮ್ ಉತ್ಪಾದಿಸುವ ಕಂಪನಿಗೆ ಪತ್ರ ಬರೆದಿರುವ ಪೊಲೀಸರು ಡ್ರಮ್ ಎಲ್ಲೆಲ್ಲಿ ಸರಬರಾಜು ಮಾಡಿದ್ದೀರಿ?, ಇತ್ತೀಚೆಗೆ ಯಾವ ಸ್ಥಳದಲ್ಲಿ ಡ್ರಮ್‌ಗಳನ್ನು ಸಾಗಿಸಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಕೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಬಹುತೇಕ ಕಡೆ ಡ್ರಮ್ ಸರಬರಾಜು ಮಾಡಿದ್ದು ಶೀಘ್ರದಲ್ಲಿ ವಿವರ ಒದಗಿಸುವುದಾಗಿಯೂ ಕಂಪನಿ ತಿಳಿಸಿದೆ" ಎಂದು ರಾಜ್ಯ ರೈಲ್ವೆ ಎಸ್ಪಿ ಎಸ್.ಕೆ.ಸೌಮ್ಯಲತಾ ತಿಳಿಸಿದರು.
ಇದನ್ನೂ ಓದಿ: ನೀಲಿ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ?